ಭಾರತೀಯ ಸೇನೆಯಲ್ಲಿ ಎನ್​ಸಿಸಿ ಅಭ್ಯರ್ಥಿಗಳಿಗೆ ವಿಶೇಷ ನೇಮಕಾತಿ

ಶಾಲೆ ಮತ್ತು ಕಾಲೇಜು ಹಂತದಲ್ಲಿ ಎನ್​ಸಿಸಿ (ನ್ಯಾಷನಲ್​ ಕ್ರೆಡಿಟ್​​ ಕಾರ್ಪ್​​) ಆದ ಅಭ್ಯರ್ಥಿಗಳಿಗೆ ಭಾರತೀಯ ಸೇನೆಯಲ್ಲಿ ವಿಶೇಷ ಮಾನ್ಯತೆ ನೀಡಲಾಗಿದೆ. ಭಾರತೀಯ ಸೇನೆ ಎನ್​ಸಿಸಿ ವಿಶೇಷ ಪ್ರವೇಶ ಯೋಜನೆ ಅಡಿ ಈ ಅಭ್ಯರ್ಥಿಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದ್ದು, ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಈ ಅಭ್ಯರ್ಥಿಗಳು ಸೇನೆಯ ಕೆಲವು ಶಿಸ್ತುಗಳನ್ನು ಕಲಿತಿರುವ ಹಿನ್ನೆಲೆ ಭಾರತೀಯ ಸೇನಾ ನೇಮಕಾತಿಯಲ್ಲಿ ಇವರಿಗಾಗಿ ವಿಶೇಷ ನೇಮಕಾತಿಯನ್ನು ನಡೆಸಲಾಗುವುದು.

ಅದರ ಅನುಸಾರ ಇದೀಗ ಭಾರತೀಯ ಸೇನೆ ಎನ್​ಸಿಸಿ ವಿಶೇಷ ಪ್ರವೇಶ ಯೋಜನೆ ಅಡಿ ಈ ಅಭ್ಯರ್ಥಿಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ವಿದ್ಯಾರ್ಹತೆ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಪದವಿಯನ್ನು ಪೂರ್ಣಗೊಳಿಸಿರಬೇಕು. ಈ ಅಭ್ಯರ್ಥಿಗಳು ಎನ್​ಸಿಸಿಯಲ್ಲಿ ಕನಿಷ್ಠ ಎರಡು ಅಥಭಾ ಮೂರು ವರ್ಷದ ಎನ್​ಸಿಸಿ ಪ್ರಮಾಣ ಪತ್ರವನ್ನು ಹೊಂದಿರಬೇಕು. ಅಂತಿಮ ಪದವಿ ಹಂತದ ವಿದ್ಯಾರ್ಥಿಗಳು ಸಹ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆ ವಿವರ: ಎನ್​ಸಿಸಿ ವಿಶೇಷ ಪ್ರವೇಶಾತಿ ಯೋಜನೆ ಅಡಿ ಭಾರತೀಯ ಸೇನೆಯಲ್ಲಿ ದೇಶಾದ್ಯಂತ ಈ ನೇಮಕಾತಿ ನಡೆಯಲಿದ್ದು, ಒಟ್ಟು 55 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಇದರಲ್ಲಿ ಪುರುಷ ಅಭ್ಯರ್ಥಿಗಳಿಗೆ 50 ಸ್ಥಾನ ಮೀಸಲಿರಿಸಲಾಗಿದ್ದು, ಮಹಿಳಾ ಅಭ್ಯರ್ಥಿಗಳಿಗೆ 5 ಸ್ಥಾನ ಮೀಸಲಿರಿಸಲಾಗಿದೆ.

ವೇತನ: ಈ ಹುದ್ದೆಗಳಿಗೆ ತರಬೇತಿ ವೇಳೆ ಮಾಸಿಕ 56,100 ರೂ. ಸ್ಟೈಫಂಡ್​ ಅನ್ನು ನೀಡಲಾಗುವುದು. ಚೆನ್ನೈನ ಆಫೀಸರ್​ ಟ್ರೈನಿಂಗ್​ ಅಕಾಡೆಮಿಯಲ್ಲಿ 49 ವಾರಗಳ ಕಾಲ ಈ ತರಬೇತಿ ನಡೆಯಲಿದೆ. ತರಬೇತಿ ಬಳಿಕ ಭಾರತೀಯ ಸೇನೆಯ ವಿವಿಧ ಹುದ್ದೆಗಳ ಸ್ತರಗಳಿಗೆ ಅನುಗುವಾಗಿ 56,100ರೂ. ನಿಂದ 2,50,000 ರೂ.ವರೆಗೆ ವೇತನ ನಿಗದಿ ಮಾಡಲಾಗಿದೆ.

ಅಭ್ಯರ್ಥಿಗಳ ವಯೋಮಿತಿ ಕನಿಷ್ಠ 19ರಿಂದ ಜನವರಿ 1, 2024ಕ್ಕೆ ಅವರ ಗರಿಷ್ಠ ವಯೋಮಿತಿ 25 ವರ್ಷ ಮೀರಿರಬಾರದು. ವಯೋಮಿತಿ ಸಡಿಲಿಕೆಯಿದ್ದು ಭಾರತೀಯ ಸೇನೆ ಇಲಾಖೆ ನಿಯಮದಂತೆ ನಡೆಸಲಾಗುವುದು.

ಈ ಹದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ಈ https://www.joinindianarmy.nic.in/ ಜಾಲತಾಣಕ್ಕೆ ಭೇಟಿ ನೀಡಿ. ಇಲ್ಲಿ ಆಫೀಸರ್​ ಎಂಟ್ರಿ ಅಪ್ಲಿಕೇಷನ್​/ಲಾಗಿನ್​ಗೆ ಭೇಟಿ ನೀಡಿ, ರಿಜಿಸ್ಟ್ರೇಷನ್​ ನಡೆಸಿ. ಬಳಿಕ ಅರ್ಜಿಯಲ್ಲಿ ಸರಿಯಾದ ದಾಖಲೆ, ವಿವರಗಳನ್ನು ನೀಡಿ ಭರ್ತಿ ಮಾಡಿ.
ಈ ಹುದ್ದೆಗಳನ್ನು ಶಾರ್ಟ್​ ಸರ್ವೀಸ್​ ಕಮಿಷನ್​ ಅಡಿ 14 ವರ್ಷಗಳ ಅವಧಿಗೆ ನೇಮಕಾತಿ ನಡೆಸಲಾಗುವುದು. ಹುದ್ದೆಯ ಆರಂಭಿಕ ಅವಧಿ 10 ವರ್ಷ ಆಗಿದ್ದು, ಇದಾದ ಬಳಿಕ 4 ವರ್ಷ ವಿಸ್ತರಣೆ ನಡೆಸಲಾಗುವುದು. ಮೊದಲ ಆರು ತಿಂಗಳ ಸಮಯ ಪ್ರೊಬೆಷನರಿ ಆಗಿರಲಿದೆ.

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಮೆಡಿಕಲ್​ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಆರಂಭ ಜುಲೈ 5ರಿಂದ ಆಗಲಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಆಗಸ್ಟ್​​ 3 ಆಗಿದೆ.