‘ಬಾಹುಬಲಿ’ ಖ್ಯಾತಿಯ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯ, ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಚಿತ್ರವು ಆರಂಭದಿಂದಲೂ ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳನ್ನು ಹುಟ್ಟುಹಾಕಿತ್ತು. ಇಂದು ಮುಂಜಾನೆ 05:12ಕ್ಕೆ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಆ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಭರ್ಜರಿ ಆಯಕ್ಷನ್ ದೃಶ್ಯಗಳು ಮತ್ತು ಪವರ್‌ಫುಲ್ ಸಂಭಾಷಣೆಗಳಿಂದ ಕೂಡಿರುವ ಈ ಟೀಸರ್, ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯುವುದರ ಜೊತೆಗೆ 25 ಮಿಲಿಯನ್ಗೂ ಹೆಚ್ಚು ಜನ ನೋಡಿ ಮೆಚ್ಚಿಕೊಂಡಿದ್ದಾರೆ.
ಈ ಸಾಲಿನ ಹೈ ವೋಲ್ಟೆಜ್ ಚಿತ್ರ ಸಲಾರ್ ಪಾರ್ಟ್ 1ರ ಟೀಸರ್ ಅನ್ನು ಇಂದು ಮುಂಜಾನೆ ಹೊಂಬಾಳೆ ಫಿಲ್ಮ್ಸ್ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಸಂಸ್ಥೆಯಡಿ ನಿರ್ಮಾಪಕ ವಿಜಯ್ ಕಿರಗಂದೂರ್ ಇಡೀ ದೇಶವೇ ತಿರುಗಿ ನೋಡುವ ಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಸ್ಯಾಂಡಲ್ವುಡ್ ಅಲ್ಲದೇ ಭಾರತೀಯ ಸಿನಿಮಾ ರಂಗದಲ್ಲಿ ಪ್ರತಿಷ್ಠಿತ ಚಲನಚಿತ್ರ ನಿರ್ಮಾಣ ಸಂಸ್ಥೆಯಾಗಿ ಹೊರಹೊಮ್ಮಿರುವ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್’.ಈಟಿವಿ ಭಾರತ ಪ್ರತಿನಿಧಿಯೊಂದಿಗೆ ಮಾತನಾಡಿದ ಹೊಂಬಾಳೆ ಫಿಲ್ಮ್ಸ್ನ ನಿರ್ಮಾಪಕ ವಿಜಯ್ ಕಿರಗಂದೂರ್ ಸಲಾರ್ ಸಿನಿಮಾ ಕುರಿತು ಕೆಲವು ಕುತೂಹಲಕಾರಿ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ನಿರ್ಮಾಪಕ ವಿಜಯ್ ಕಿರಗಂದೂರ್, ”ಈ ಸಿನಿಮಾ ಪ್ರಾರಂಭವಾದಾಗಲೇ ನಾವು ಇದು ಯಾವುದೋ ಒಂದು ಭಾಷೆಯ ಅಥವಾ ಪ್ಯಾನ್ ಇಂಡಿಯಾ ಸಿನಿಮಾವಲ್ಲ ಎಂದು ಹೇಳಿದ್ದೆವು. ಇದು ಎಲ್ಲೆಡೆ ಸಲ್ಲುವ ಭಾರತೀಯ ಚಿತ್ರವಾಗಬೇಕು ಎಂಬುದು ನಮ್ಮ ಆಸೆ. ಅದರಂತೆ ಈ ಚಿತ್ರ ಮೂಡಿಬಂದಿದ್ದು, ಭಾರತದಲ್ಲಷ್ಟೇ ಅಲ್ಲದೇ ಹೊರದೇಶಗಳಲ್ಲೂ ಭಾರತೀಯ ಚಿತ್ರವಾಗಿ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಕನ್ನಡದ ನಿರ್ಮಾಣ ಸಂಸ್ಥೆಯೊಂದು, ಪ್ಯಾನ್ ಇಂಡಿಯಾ ಸ್ಟಾರ್ ಒಬ್ಬರ ಚಿತ್ರವೊಂದನ್ನು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಮಾಡುತ್ತಿರುವುದು ಹೆಮ್ಮೆಯ ವಿಷಯ. ಕನ್ನಡದ ನಿರ್ಮಾಣ ಸಂಸ್ಥೆ, ನಿರ್ದೇಶಕರು, ತಂತ್ರಜ್ಞರು ಮತ್ತು ಕಲಾವಿದರು, ತೆಲುಗಿನ ಸ್ಟಾರ್ ನಟ ಪ್ರಭಾಸ್, ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್, ತಮಿಳಿನ ಶ್ರುತಿ ಹಾಸನ್ ಹೀಗೆ ಎಲ್ಲಾ ಭಾಷೆಯವರನ್ನೊಳಗೊಂಡ ಸಿನಿ ತಂಡ ಕೆಲಸ ಮಾಡಿದೆ.”
‘ಕೆಜಿಎಫ್’ ಮೂಲಕ ಇಡೀ ದೇಶವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ್ದ ಪ್ರಶಾಂತ್ ನೀಲ್, ಈ ಬಾರಿ ‘ಸಲಾರ್’ ಮೂಲಕ ಮತ್ತೊಂದು ಹೊಸ ಪ್ರಪಂಚವನ್ನೇ ಸೃಷ್ಟಿಸಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಈವರೆಗೂ ಕಂಡುಕೇಳರಿಯದಷ್ಟರ ಮಟ್ಟಿಗೆ ಚಿತ್ರ ನಿರ್ಮಾಣವಾಗಿದೆ. ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ 14 ಅದ್ಭುತ ಸೆಟ್ಗಳನ್ನು ಈ ಚಿತ್ರಕ್ಕಾಗಿ ನಿರ್ಮಿಸಿ, ಅಲ್ಲೇ ಚಿತ್ರೀಕರಣ ಮಾಡಲಾಗಿದೆ.