ಬೆಂಗಳೂರು: ಗೋಹತ್ಯೆ ನಿಷೇಧಿಸುವ ಕಾನೂನನ್ನು ರದ್ದುಗೊಳಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಕರ್ನಾಟಕ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಬುಧವಾರ ವಿಧಾನ ಪರಿಷತ್ತಿಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಜಾನುವಾರು ವಧೆ ತಡೆ ಮತ್ತು ಸಂರಕ್ಷಣೆ ಕಾಯಿದೆ, 2020 ಅನ್ನು ರದ್ದುಗೊಳಿಸುವ ಯಾವುದೇ ಪ್ರಸ್ತಾವನೆ ಸರಕಾರದ ಮುಂದಿಲ್ಲ ಎಂದು ಬಿಜೆಪಿ ಎಂಎಲ್ಸಿ ಎನ್ ರವಿಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ವೆಂಕಟೇಶ್, ಇನ್ನೂ ಕಾಯ್ದೆಯ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದಿದ್ದಾರೆ.
ವೆಂಕಟೇಶ್ ಅವರ ಹೇಳಿಕೆಯ ಹೊರತಾಗಿಯೂ, ಬಿಜೆಪಿ ಎಂಎಲ್ಸಿಗಳು ಪ್ರತಿಭಟನೆ ನಡೆಸಿದ್ದು, ಭವಿಷ್ಯದಲ್ಲಿ ಕಾನೂನನ್ನು ಏನು ಮಾಡಲು ಯೋಜಿಸುತ್ತಿದೆ ಎಂಬುದರ ಕುರಿತು ಸರ್ಕಾರದಿಂದ ಹೆಚ್ಚಿನ ಸ್ಪಷ್ಟತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಗೋಹತ್ಯೆ ಮತ್ತು ಅಕ್ರಮ ಗೋ ಸಾಗಣೆಯಲ್ಲಿ ತೊಡಗಿರುವವರಿಗೆ ಶಿಕ್ಷೆ ನೀಡಲು ಕಾಯಿದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕೆಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.