ಪ್ಯಾರಾಲಿಂಪಿಕ್ ಕ್ರೀಡಾಪಟು ರೂಪಾ ಅವರಿಗೆ ಆರ್ಥಿಕ ಸಹಾಯ ಹಸ್ತ ಚಾಚಿ ಹೃದಯ ವೈಶಾಲ್ಯ ಮೆರೆದ ಪ್ರಮೋದ್ ಮಧ್ವರಾಜ್

ಉಡುಪಿ: ದಾವಣಗೆರೆಯ ಹರಿಹರ ನಿವಾಸಿ ರೂಪಾ ಎನ್ ಪ್ಯಾರಾಲಿಂಪಿಕ್ ವಾಲಿಬಾಲ್ ಕ್ರೀಡಾಪಟುವಾಗಿದ್ದು, ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಹಲವಾರು ಸ್ಪರ್ಧೆಗಳಲ್ಲಿ ಗೆದ್ದಿದ್ದಾರೆ. ಇದೀಗ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದರು.

ಜುಲೈ 3 ರಿಂದ 8 ಕಝಾಕಿಸ್ತಾನ್ ನ ಅಲ್ಮಾಟಿಯಲ್ಲಿ ನಡೆಯಲಿರುವ ವಿಶ್ವ ಪ್ಯಾರಾವಾಲಿ ಸಿಟ್ಟಿಂಗ್ ವಾಲಿಬಾಲ್ ಏಷ್ಯನ್ ವಲಯ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಪ್ಯಾರಾಲಿಂಪಿಯನ್‌ಗೆ ಆರ್ಥಿಕ ಸಹಾಯದ ಅಗತ್ಯವಿದ್ದು, ರೂಪಾ ಅವರ ಕಝಾಕಿಸ್ತಾನ್ ಪ್ರವಾಸದ ಖರ್ಚಿಗೆ ಪ್ಯಾರಾಲಿಂಪಿಕ್ ವಾಲಿಬಾಲ್ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ಹಣ ನೀಡಲು ಸಾಧ್ಯವಾಗುತ್ತಿಲ್ಲವಾದ್ದರಿಂದ ಪ್ರಾಯೋಜಕರು ಮತ್ತು ದಾನಿಗಳಿಗಾಗಿ ಅವರು ಎದುರು ನೋಡುತ್ತಿದ್ದರು. ಚಾಂಪಿಯನ್ ಶಿಪ್ ನ ಒಟ್ಟು ವೆಚ್ಚ ಸುಮಾರು 3 ಲಕ್ಷ ರೂ ಆಗಿದ್ದು ದಾನಿಗಳ ನೆರವಿನಿಂದ ಕೇವಲ 50 ಸಾವಿರ ರೂ ಹೊಂದಿಸಲು ಸಾಧ್ಯವಾಗಿತ್ತು.

ರೂಪಾ ಅವರ ಆರ್ಥಿಕ ಮುಗ್ಗಟ್ಟಿನ ಸುದ್ದಿ ತಿಳಿದ ತಕ್ಷಣ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸಹಾಯ ಹಸ್ತ ಚಾಚಿದ್ದು, 25 ಸಾವಿರ ರೂಗಳ ಆರ್ಥಿಕ ನೆರವನ್ನು ನೀಡಿದ್ದು ಹೃದಯ ವೈಶಾಲ್ಯ ಮೆರೆದಿದ್ದಾರೆ. ಈ ಹಿಂದೆಯೂ ಕೂಡಾ ಹಲವಾರು ಪ್ರಕರಣಗಳಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚಿರುವ ಪ್ರಮೋದ್ ಮಧ್ವರಾಜ್ ಈ ಬಾರಿಯೂ ಕ್ರೀಡಾಪಟುವಿನ ನೆರವಿಗೆ ಬಂದಿದ್ದು, ಅವರ ಈ ಸಹೃದಯತೆಗೆ ರೂಪಾ ಅವರು ಧನ್ಯವಾದ ಸಲ್ಲಿಸಿದ್ದಾರೆ.