ಕಟಪಾಡಿ: ಆನೆಗುಂದಿ ಶ್ರೀ ಗಳಿಂದ ಚಾತುರ್ಮಾಸ್ಯ ವ್ರತ ದೀಕ್ಷೆ

ಕಟಪಾಡಿ: ಪಡುಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧಿಪತಿ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾ ಸ್ವಾಮೀಜಿ ಅವರ 19ನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ ಪಡುಕುತ್ಯಾರು ಮೂಲಮಠದಲ್ಲಿ ಸೋಮವಾರ ಪ್ರಾರಂಭಗೊಂಡಿತು.

ವೈದಿಕ ಕಾರ್ಯಕ್ರಮಗಳ ಬಳಿಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀಗಳು ಆಶೀರ್ವಚನ ನೀಡಿ, ಈ ಅವಧಿಯಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಗಳಿಗೆ ಒತ್ತು ನೀಡಲಾಗುವುದು ಎಂದರು.

ಗೌರವಾರ್ಪಣೆ ಸ್ವೀಕರಿಸಿದ ನಟ ಸತೀಶ್ ಆಚಾರ್ಯ ಪೆರ್ಡೂರು ಮಾತನಾಡಿ, ಹುಟ್ಟು- ಸಾವಿನ ನಡುವಿನ ಜೀವನ ಯಶಸ್ವಿಯಾಗಿ ಮುನ್ನಡೆಯುವಲ್ಲಿ ಗುರುಗಳ ಅನುಗ್ರಹ, ಆಶೀರ್ವಚನ ಮತ್ತು ಮಾರ್ಗದರ್ಶನ ಅತೀ ಅಗತ್ಯವಾಗಿದೆ ಎಂದರು.

ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಮತ್ತು ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ವಡೇರ ಹೋಬಳಿ ಶ್ರೀಧರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.

ಗೌರವಾಧ್ಯಕ್ಷ ಪಿ.ವಿ ಗಂಗಾಧರ ಆಚಾರ್ಯ ಉಡುಪಿ, ಮಂಗಳೂರು ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ಕೇಶವ ಆಚಾರ್ಯ, ನಾಗಧರ್ಮೇಂದ್ರ ಸರಸ್ವತಿ ಸಂಸ್ಕೃತ ವೇದ ಸಂಜೀವಿನೀ ಪಾಠಶಾಲೆಯ ಪ್ರಧಾನ ಸಂಚಾಲಕ ಬಿ. ಸೂರ್ಯಕುಮಾರ ಆಚಾರ್ಯ ಹಳೆಯಂಗಡಿ, ಸರಸ್ವತೀ ಪೀಠ ಪಂಚಸಿಂಹಾಸನ ವಿಕಾಸ ಸಮಿತಿ ಅಧ್ಯಕ್ಷ ಹರಿಶ್ಚಂದ್ರ ಎನ್. ಆಚಾರ್ಯ ಬೆಂಗಳೂರು, ಅಸ್ಸೆಟ್ ಅಧ್ಯಕ್ಷ ಮೋಹನ ಕುಮಾರ್ ಬೆಳ್ಳೂರು, ಗೋವು ಪರ್ಯಾವರಣ್ ಸಂರಕ್ಷಣ ಟ್ರಸ್ಟ್ ಅಧ್ಯಕ್ಷ ಸುಂದರ ಆಚಾರ್ಯ ಬೆಳುವಾಯಿ, ಪ್ರಮುಖರಾದ ಗಣೇಶ್ ಆಚಾರ್ಯ, ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಲತಾ ಎಸ್. ಆಚಾರ್ಯ ಕುತ್ಯಾರು ಉಪಸ್ಥಿತರಿದ್ದರು.

ಪ್ರತಿಷ್ಠಾನದ ಪ್ರ. ಕಾರ್ಯದರ್ಶಿ ಲೋಕೇಶ್ ಎಂ. ಬಿ. ಆಚಾರ್ ಕಂಬಾರು ಸ್ವಾಗತಿಸಿದರು. ಕೋಶಾಧಿಕಾರಿ ಅರವಿಂದ ವೈ. ಆಚಾರ್ಯ ವಂದಿಸಿ, ಕೆ. ಎಂ.ಗಂಗಾಧರ ಆಚಾರ್ಯ ನಿರೂಪಿಸಿದರು.