ಬೆಂಗಳೂರು: ಮುಖ್ಯಮಂತ್ರಿ ಕಚೇರಿಯಲ್ಲಿ ಲಂಚವಿಲ್ಲದೆ ಯಾವುದೇ ಕೆಲಸ ನಡೆಯುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಮುಖಂಡ ಎಚ್ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಸೋಮವಾರದಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ಸಿಎಂ ಕಚೇರಿಯ ಸಿಬ್ಬಂದಿಗಳು ಶಾಸಕರ ಶಿಫಾರಸು ಪತ್ರಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಮತ್ತು ಯಾವುದೇ ಕೆಲಸ ಮಾಡಲು 30 ಲಕ್ಷ ರೂ.ಗೆ ಬೇಡಿಕೆ ಇಡುತ್ತಿದ್ದಾರೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವ ಬಗ್ಗೆ ಸುಳಿವು ನೀಡಿದ ಅವರು ಈ ಸರ್ಕಾರದಲ್ಲಿ ವರ್ಗಾವಣೆ ಸಿಂಡಿಕೇಟ್ ಶುರುವಾಗಿದೆ. ಒಂದೊಂದು ಇಲಾಖೆಯಲ್ಲಿ ಒಂದೊಂದು ಸಿಂಡಿಕೇಟ್ ಇರುತ್ತದೆ. ಯಾರನ್ನು ವರ್ಗಾವಣೆ ಮಾಡಬೇಕು ಎಂಬ ಪಟ್ಟಿಯನ್ನು ನೀಡಿ ಆ ಪಟ್ಟಿಯಂತೆ ವರ್ಗಾವಣೆ ಮಾಡಲಾಗುತ್ತದೆ. ಈ ಸರ್ಕಾರದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಹೊಸ ಸಿಂಡಿಕೇಟ್ ಆರಂಭವಾಗಿದೆ ಎಂದಿದ್ದಾರೆ.
ಸಮ್ಮಿಶ್ರ ಸರಕಾರದಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಸಬ್ ರಿಜಿಸ್ಟ್ರಾರ್ ವರ್ಗಾವಣೆಯಲ್ಲಿ ಸಾರಿಗೆ ಇಲಾಖೆಯಲ್ಲಿ ಸಿಂಡಿಕೇಟ್ ಇತ್ತು. ಆದರೆ, ನನಗೆ ಅಧಿಕಾರವಿಲ್ಲ ಎಂದು ಕಣ್ಣು ಮುಚ್ಚಿ ಕುಳಿತಿದ್ದೆ. ಕಾಂಗ್ರೆಸ್ ಶಿಫಾರಸ್ಸಿನ ಮೇರೆಗೆ ವರ್ಗಾವಣೆ ಮಾಡಲಾಗಿದೆ. ಈಗ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಸಿಂಡಿಕೇಟ್ ಕೆಲಸ ಮಾಡುತ್ತಿದೆ. ವರ್ಗಾವಣೆ ಆದೇಶಕ್ಕೆ ಸಿಎಂ ಅನುಮೋದನೆ ನೀಡಿದ್ದರೂ ಹಣ ಮಾಡುವ ಉದ್ದೇಶದಿಂದ ಕೆಲ ಸಚಿವರು ಹಿಂದೇಟು ಹಾಕುತ್ತಿದ್ದಾರೆ. ಸಿಎಂ ಕಚೇರಿಯಿಂದ ವಿವಿಧ ಇಲಾಖೆಗಳಿಗೆ ವರ್ಗಾವಣೆ ಆದೇಶವನ್ನು ಸಚಿವರು ತಡೆ ಹಿಡಿದಿದ್ದಾರೆ. ನಾನು ಅಂತಹ ಅನೇಕ ಪ್ರಕರಣಗಳನ್ನು ನೀಡಬಲ್ಲೆ ಎಂದು ಅವರು ಆರೋಪಿಸಿದ್ದಾರೆ.
ನಾನು ಸಿಎಂ ಆಗಿದ್ದಾಗ ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರಿಗೆ ಯಾವುದೇ ತಾರತಮ್ಯವಿಲ್ಲದೆ 19 ಸಾವಿರ ಕೋಟಿ ರೂ. ಬಿಡುಗಡೆ ಮಾಡಿದ್ದು ನನ್ನಂತೆ ಸಿದ್ದರಾಮಯ್ಯ ಕ್ಷೇತ್ರಕ್ಕೆ ಅಷ್ಟು ಹಣ ಬಿಡುಗಡೆ ಮಾಡಲಿ. ಈ ಎಲ್ಲ ವಿಷಯಗಳ ಬಗ್ಗೆ ನಾನು ಯಾವುದೇ ಸಂಕೋಚವಿಲ್ಲದೆ ವಿಧಾನಸಭೆ ಅಧಿವೇಶನದಲ್ಲಿ ಮಾತನಾಡುತ್ತೇನೆ ಎಂದು ಅವರು ತಿಳಿಸಿದ್ದಾರೆ.