ಉಡುಪಿ: ಆಸರೆ ಚಾರಿಟೇಬಲ್ ಟ್ರಸ್ಟ್(ರಿ) ಕಡಿಯಾಳಿ ವತಿಯಿಂದ ಜೂ. 27ರಂದು ಉಡುಪಿ ನಗರದ ಸುಬ್ರಹ್ಮಣ್ಯ ನಗರದಲ್ಲಿ 3 ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕವನ್ನು ಒದಗಿಸಲಾಯಿತು.
ಫಲಾನುಭವಿಗಳಾದ ಅಮಿತ, ಶೀಲಾ ಹಾಗೂ ಸದಾಶಿವ ಇವರ ಮನೆಗೆ ದಾನಿಗಳಾದ ಖ್ಯಾತಿ ಭಟ್ ಮತ್ತು ಸ್ತುತಿ ಭಟ್, ಮಂಜುಳಾ ಶೆಣೈ ವಿದ್ಯುತ್ ಸಂಪರ್ಕ ಒದಗಿಸಿರುತ್ತಾರೆ. ನಗರಸಭೆ ಸ್ಥಾಯಿ ಸಮಿತಿ ಸದಸ್ಯ ಶ್ರೀಶ ಕೊಡವೂರು, ಶೀಲಾ ಅವರ ಮನೆಯ ವಿದ್ಯುತ್ ಸಂಪರ್ಕಕ್ಕೆ ಚಾಲನೆ ನೀಡಿದರು.
ಶೀಲಾ ಅವರ ಮನೆಗೆ ಉಚಿತ ವಿದ್ಯುತ್ ಸೌಲಭ್ಯ ಕಲ್ಪಿಸಲು ಮೂಡುಬೆಳ್ಳೆ ಗೌರಿ ನಾಯಕ್ ಅವರು ತಮ್ಮ ಹುಟ್ಟುಹಬ್ಬದ ಸಲುವಾಗಿ ಈ ಉಚಿತ ವಿದ್ಯುತ್ ಸಂಪರ್ಕದ ಕೊಡುಗೆಯನ್ನು ನೀಡಿದ್ದರು.
ಆಸರೆ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯದರ್ಶಿ ಕೆ ರಾಘವೇಂದ್ರ ಕಿಣಿ ಮಾತನಾಡಿ, ಉಡುಪಿಯಲ್ಲಿ ದಾನಿಗಳ ಸಹಕಾರದಿಂದ 133 ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಿದ್ದೇವೆ. ಈ ಮೂಲಕ ಉಡುಪಿ ಇಡೀ ದೇಶಕ್ಕೆ ಮಾದರಿಯಾಗಿದೆ. ಉಡುಪಿಯನ್ನು ಶೇಕಡಾ 100 ರಷ್ಟು ವಿದ್ಯುತ್ ಸಂಪರ್ಕ ಜಿಲ್ಲೆಯನ್ನಾಗಿ ಪರಿವರ್ತಿಸುವುದು ನಮ್ಮ ಗುರಿ. ಡಿಸೆಂಬರ್ ಮೊದಲು ಉಡುಪಿಯಲ್ಲಿರುವ ಮನೆಗಳಿಗೆ ಶೇಕಡಾ 100 ರಷ್ಟು ವಿದ್ಯುತ್ ಸಂಪರ್ಕವನ್ನು ನೀಡುವ ಗುರಿಯನ್ನು ನಾವು ಹೊಂದಿದ್ದೇವೆ ಎಂದರು.
ದಾನಿ ಮಂಜುಳಾ ಶೆಣೈ ಮಾತನಾಡಿ, ಆಸರೆ ಚಾರಿಟಬಲ್ ಟ್ರಸ್ಟ್ ಮೂಲಕ ಉಚಿತ ವಿದ್ಯುತ್ ನೀಡುವ ಮೂಲಕ ನನ್ನ ಅತ್ತೆಯ ಹುಟ್ಟುಹಬ್ಬವನ್ನು ಆಚರಿಸಿದ್ದೇವೆ. ಉಡುಪಿಯನ್ನು ಶೇ.100ರಷ್ಟು ವಿದ್ಯುತ್ ಸಂಪರ್ಕ ಕಲ್ಪಿಸಲು ಆಸರೆ ಚಾರಿಟಿ ಟ್ರಸ್ಟ್ ಶ್ರಮಿಸುತ್ತಿದೆ. ಈ ಮೂಲಕ ಜನರು ಸ್ಫೂರ್ತಿ ಪಡೆದು ತಾವೂ ಕೂಡಾ ಈ ಕಾರ್ಯದಲ್ಲಿ ಕೈಜೋಡಿಸಬೇಕು ಎಂಡರು.
ಮಾಜಿ ಸಿಎಂಸಿ ಸದಸ್ಯೆ ಸುಬೇಧಾ ಮಾತನಾಡಿ, ಫಲಾನುಭವಿ ಸುಶೀಲಾ ವಿದ್ಯುತ್ ಇಲ್ಲದೆ ಸಾಕಷ್ಟು ತೊಂದರೆ ಅನುಭವಿಸಿದ್ದರು. ಅಗತ್ಯ ದಾಖಲೆಗಳ ಕೊರತೆಯಿಂದ ಹೊಸ ಮನೆ ಕಟ್ಟಲು ಅವರಿಗೆ ಸಾಧ್ಯವಾಗಿಲ್ಲ. ವಿದ್ಯುತ್ ಸಂಪರ್ಕದಿಂದ ವಂಚಿತರಾಗಿರುವುದು ತಿಳಿದಾಗ ಪುರಸಭೆ ಸದಸ್ಯೆ ಜಯಂತಿ ಪೂಜಾರಿ ಅವರನ್ನು ಸಂಪರ್ಕಿಸಿದರು. ಅವರು ಆಸರೆ ಚಾರಿಟಬಲ್ ಟ್ರಸ್ಟ್‌ಗೆ ತಿಳಿಸಿದಾಗ ಟ್ರಸ್ಟ್ ನ ಮೂಲಕ ವಿದ್ಯುತ್ ಸಂಪರ್ಕವನ್ನು ನೀಡಲಾಗಿದೆ.
ಈ ಸಂದರ್ಭದಲ್ಲಿ ದಾನಿಗಳಾದ ವಲ್ಲಭ ಭಟ್ ಮಲ್ಪೆ, ನಗರಸಭಾ ಸದಸ್ಯೆ ಜಯಂತಿ ಪೂಜಾರಿ, ಆಶಾ ಭಟ್, ಆಸರೆ ಚಾರಿಟೇಬಲ್ ಟ್ರಸ್ಟ್ ಖಜಾಂಚಿ ಸತೀಶ್ ಕುಲಾಲ್, ರಾಕೇಶ್ ಜೋಗಿ, ನಾಗರಾಜ ಪ್ರಭು ಉಪಸ್ಥಿತರಿದ್ದರು.