ಬೆಂಗಳೂರು: ದಿನಬಳಕೆಯ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರಿದ್ದು, ವಿದ್ಯುತ್ ದರ ಏರಿಕೆಯ ಆಘಾತದ ಬೆನ್ನಲ್ಲೇ ನಂದಿನಿ ಹಾಲಿನ ದರವೂ ಲೀಟರಿಗೆ 5 ರೂ. ಏರುವ ಭಯ ಗ್ರಾಹಕರಲ್ಲಿ ಶುರುವಾಗಿದೆ. ನಂದಿನ ಹಾಲಿನ ದರ ಪರಿಷ್ಕರಣೆಗೆ 14 ಹಾಲಿನ ಒಕ್ಕೂಟಗಳು ಪಟ್ಟು ಹಿಡಿದಿವೆ.
ಈ ಹಿಂದೆ ಬೊಮ್ಮಾಯಿ ಸರ್ಕಾರದ ಸಂಧರ್ಭದಲ್ಲಿಯೂ ಹಾಲಿನ ದರ ಏರಿಕೆ ಬಗ್ಗೆ ಒಕ್ಕೂಟಗಳು ಮನವಿ ಮಾಡಿದ್ದವು. ಬೊಮ್ಮಾಯಿ ಸರ್ಕಾರ ಲೀಟರಿಗೆ 2 ರೂ ಏರಿಕೆ ಮಾಡುವಂತೆ ಒಪ್ಪಿಗೆ ನೀಡಿತ್ತು. ಇದೀಗ ಸರಕಾರ ಬದಲಾಗಿದ್ದು, ದರ ಏರಿಕೆಯ ಬೇಡಿಕೆ ಮುನ್ನೆಲೆಗೆ ಬಂದಿದೆ.
ಈ ಬಗ್ಗೆ ಕೆಎಂಫ್ ನೂತನ ಅಧ್ಯಕ್ಷರಾದ ಭೀಮಾ ನಾಯ್ಕ್ ಮಾತನಾಡಿ, ಜುಲೈ 6ರಂದು ಕೆಎಂಎಫ್ ಕೇಂದ್ರ ಕಚೇರಿಯಲ್ಲಿ ಸಭೆ ನಡೆಯಲಿದೆ. ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ. ಪ್ರತಿ ಲೀಟರ್ಗೆ 5 ರೂ. ಹೆಚ್ಚಿಸುವಂತೆ ಮನವಿ ಮಾಡಲಾಗಿದೆ. ಸಭೆಯ ಬಳಿಕ ಸಿಎಂಗೆ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಮನವಿ ಮಾಡುತ್ತೇವೆ. ನಂದಿನಿ ಹಾಲಿನ ದರ 5 ರೂಪಾಯಿ ಏರಿಸಲು ರಾಜ್ಯ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದೇವೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಚರ್ಚಿಸಿ, ಬಳಿಕ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
ಒಂದೊಮ್ಮೆ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿದಲ್ಲಿ ಬರಗಾಲದಲ್ಲಿ ಅಧಿಕ ಮಾಸ ಎನ್ನುವ ಗಾದೆ ಮಾತಿನಂತೆ ಜನಸಾಮಾನ್ಯರು ಬೆಲೆ ಏರಿಕೆಯ ಬರೆಯಿಂದ ತತ್ತರಿಸಿ ಹೋಗಲಿದ್ದಾರೆ.