ಶಿಕ್ಷಣ ಸಂಸ್ಥೆಗಳು ಪಡೆಯುವ ದೇಣಿಗೆಗೆ ತೆರಿಗೆ ವಿನಾಯಿತಿ ಎಂದು ಹೈಕೋರ್ಟ್ ಆದೇಶ

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ಸಮಿತಿಗೆ ಆದಾಯ ತೆರಿಗೆ ವಿನಾಯಿತಿ ನೀಡಿ ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣ ನೀಡಿದ್ದ ಆದೇಶ ಪ್ರಶ್ನಿಸಿ ಆದಾಯ ತೆರಿಗೆ ಇಲಾಖೆ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಮತ್ತು ನ್ಯಾ.ಟಿ.ಜಿ. ಶಿವಶಂಕರೇ ಗೌಡ ಅವರಿದ್ದ ವಿಭಾಗೀಯ ಪೀಠ ವಜಾಗೊಳಿಸಿ ಆದೇಶಿಸಿದೆ.

”ಶಿಕ್ಷಣ ಸಂಸ್ಥೆಗಳು ಸಾರ್ವಜನಿಕರಿಂದ ಪಡೆಯುವ ದೇಣಿಗೆಗೆ ಆದಾಯ ತೆರಿಗೆ ಪಾವತಿಯಿಂದ ವಿನಾಯಿತಿ ಇರಲಿದೆ” ಎಂದು ಹೈಕೋರ್ಟ್‌ನ ವಿಭಾಗೀಯ ಪೀಠ ತಿಳಿಸಿದೆ.ಅಲ್ಲದೇ, ಶಿಕ್ಷಣ ನೀಡುವ ಕಾಯಕದಲ್ಲಿ ತೊಡಗಿರುವ ಚಾರಿಟಬಲ್ ಶಿಕ್ಷಣ ಸಂಸ್ಥೆಗಳು ಕಾಯಿದೆಯ ವ್ಯಾಪ್ತಿಗೆ ಒಳಪಡಲಿದ್ದು, ಅವುಗಳು ನೋಂದಣಿ ಮಾಡಲ್ಪಟ್ಟಿರಲಿವೆ. ದೇಣಿಗೆ ರೂಪದಲ್ಲಿ ಬರುವ ಎಲ್ಲ ಹಣವನ್ನು ಶಿಕ್ಷಣಕ್ಕೆ ಬಳಸಲಾಗುತ್ತದೆ.

ಹಾಗಾಗಿ ಕಾಯಿದೆಯ ಸೆಕ್ಷನ್ 11 ಮತ್ತು 12ರಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಆದಾಯ ತೆರಿಗೆ ವಿನಾಯಿತಿಯನ್ನು ಶಿಕ್ಷಣ ಸಂಸ್ಥೆಗಳಿಗೆ ನೀಡಲಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.

ಆದಾಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರು ಮತ್ತೆ ಪರಿಶೀಲನೆ ವೇಳೆ, ಆದಾಯ ತೆರಿಗೆ ವಿನಾಯಿತಿ ಕೋರಿರುವುದಕ್ಕೆ ಆಕ್ಷೇಪ ಎತ್ತಿದ್ದರು. ಅಸೆಸ್‌ಮೆಂಟ್ ಆದೇಶ ಹೊರಡಿಸಿದ್ದರು. ಹಾಗಾಗಿ ಟ್ರಸ್ಟ್ ಆದಾಯ ತೆರಿಗೆ ವಿನಾಯ್ತಿಗೆ ಅರ್ಹವಲ್ಲ ಎಂದು ಹೇಳಿದ್ದರು. ಪ್ರಶ್ನಿಸಿ ರಾಷ್ಟ್ರೀಯ ಶಿಕ್ಷಣ ಸಮಿತಿ ಆದಾಯ ತೆರಿಗೆ ಮೇಲ್ಮನವಿ ಪ್ರಾಧಿಕಾರದಲ್ಲಿ ಅರ್ಜಿ ಸಲ್ಲಿಸಿತ್ತು.

ಅರ್ಜಿ ವಿಚಾರಣೆ ನಡೆಸಿದ್ದ ಪ್ರಾಧಿಕಾರ ಅರ್ಜಿಯನ್ನು ಪುರಸ್ಕರಿಸಿ ಶಿಕ್ಷಣ ಸಂಸ್ಥೆಗಳು ಆದಾಯ ತೆರಿಗೆ ವಿನಾಯ್ತಿಗೆ ಅರ್ಹವಾಗಿರಲಿವೆ ಎಂಬುದಾಗಿ ತಿಳಿಸಿತ್ತು. ಪ್ರಶ್ನಿಸಿ ಆದಾಯ ತೆರಿಗೆ ಇಲಾಖೆ ಹೈಕೋರ್ಟ್ ಮೆಟ್ಟಿಲೇರಿತ್ತು.

ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ರಾಷ್ಟ್ರೀಯ ಶಿಕ್ಷಣ ಸಮಿತಿ ಆದಾಯ ತೆರಿಗೆ ಕಾಯಿದೆ 1971 ಸೆಕ್ಷನ್ 12ಎ ಅಡಿ ಟ್ರಸ್ಟ್ ಅನ್ನು ನೋಂದಾಯಿಸಿಕೊಂಡಿದೆ. ಜೊತೆಗೆ ಸೆಕ್ಷನ್ 11 ಮತ್ತು 12ರಡಿ ಅನುಮೋದನೆಯನ್ನು ಪಡೆದುಕೊಂಡಿದೆ. ಅದರಂತೆ ತೆರಿಗೆ ವಿನಾಯಿತಿ ಪಡೆದುಕೊಂಡಿದ್ದ ಟ್ರಸ್ಟ್ 2012-12ನೇ ಸಾಲಿನಲ್ಲಿ ಆದಾಯ ತೆರಿಗೆಯನ್ನು ಶೂನ್ಯ ಎಂದು ತೋರಿಸಿತ್ತು.

ಆದರೆ, ಟ್ರಸ್ಟ್ 27.23 ಕೋಟಿ ರೂ. ಗಳನ್ನು ದೇಣಿಗೆ ರೂಪದಲ್ಲಿ ಸಂಗ್ರಹಿಸಿದ್ದು, ಅದು ಕರ್ನಾಟಕ ಶಿಕ್ಷಣ ಕಾಯಿದೆಗೆ ವಿರುದ್ಧವಾಗಿದೆ ಎಂಬ ಅಂಶದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಆದಾಯ ತೆರಿಗೆ ಕಾಯಿದೆ ಸೆಕ್ಷನ್ 142(1) ಮತ್ತು 143(2)ರಡಿ ನೋಟಿಸ್ ಜಾರಿ ಮಾಡಿತ್ತು. ಅದರಂತೆ, ಪರಿಷ್ಕೃತ ರಿಟನ್ಸ್ ಫೈಲ್ ಮಾಡಿತ್ತು. ಅದರಲ್ಲಿ ಹೆಚ್ಚುವರಿಯಾಗಿ ತೋರಿಸಲಾಗಿದ್ದ ದೇಣಿಗೆಗಳಿಗೆ ಸಂಸ್ಥೆ ಆದಾಯ ತೆರಿಗೆ ವಿನಾಯ್ತಿಯನ್ನು ಕೋರಿರುವುದಾಗಿ ತಿಳಿಸಿತ್ತು.