ಉಡುಪಿ: ಅತ್ತ ರಸ್ತೆಯೂ ಇಲ್ಲ, ಇತ್ತ ಬಸ್ ನಿಲ್ದಾಣವೂ ಇಲ್ಲ ಜೋರಾಗಿ ಮಳೆ ಬಂದರೆ ನಿಂತ ಭೂಮಿ ಕುಸಿಯುತ್ತದೆ ಅನ್ನುವ ಭಯ. ಈ ದೃಶ್ಯಗಳು ಕಂಡು ಬರುವುದು ಕುಂದಾಪುರ – ಉಡುಪಿ ನಡುವೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66 ರ ಪ್ರಮುಖ ಜಂಕ್ಷನ್ ಸಂತೆಕಟ್ಟೆಯಲ್ಲಿ.
ಸಂತೆಕಟ್ಟೆಯ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಜನರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ಪ್ರಯಾಣಿಸುವಂತಾಗಿದೆ. ಮಾತ್ರವಲ್ಲ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬಸ್ ಗಾಗಿ ಕಾಯುವುದು ಕೂಡಾ ಪ್ರಾಣಾಪಾಯಕಾರಿಯಾಗಿದೆ.
ಪ್ರಸ್ತುತ ಸಂತೆಕಟ್ಟೆಯಲ್ಲಿ ಓವರ್ ಪಾಸ್ ನಿರ್ಮಾಣಕ್ಕಾಗಿ ಗುಂಡಿ ತೋಡಿ ಕಾಮಗಾರಿಯನ್ನು ನಡೆಸುತ್ತಿದ್ದು, ಇದರಿಂದಾಗಿ ದಿನನಿತ್ಯ ಬಸ್ ಗಾಗಿ ಕಾಯುವ ವಿದ್ಯಾರ್ಥಿಗಳು, ನಿತ್ಯ ಪ್ರಯಾಣಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕುಂದಾಪುರ, ಬ್ರಹ್ಮಾವರ, ಕೆಮ್ಮಣ್ಣು, ಕಲ್ಯಾಣಪುರ ಭಾಗದಿಂದ ಬರುವ ಎಲ್ಲಾ ಬಸ್ಸುಗಳು ಸಂತೆಕಟ್ಟೆ ಜಂಕ್ಷನ್ ನಲ್ಲಿಯೇ ನಿಲುಗಡೆ ಆಗುತ್ತಿದ್ದು, ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ಸಿಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಂತೆಕಟ್ಟೆ, ಕಲ್ಯಾಣಪುರ, ತೆಂಕನಿಡಿಯೂರು ಈ ಭಾಗದಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿ ಸಾವಿರಾರು ಮಂದಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಜನ ಸಾಮಾನ್ಯರು, ಉದ್ಯೋಗಕ್ಕೆ ತೆರಳುವವರುಎಲ್ಲರೂ ಕೂಡಾ ಜೀವ ಕೈಯಲ್ಲಿ ಹಿಡಿದು ರಾಷ್ಟ್ರೀಯ ಹೆದ್ದಾರಿಯನ್ನು ದಾಟ ಬೇಕಾದ ಪರಿಸ್ಥಿತಿ ಬಂದೊದಗಿದೆ
ಈಗಾಗಲೇ ಅಂಡರ್ ಪಾಸ್ ನಿರ್ಮಿಸಲು ಅಗೆದ ರಸ್ತೆಯಲ್ಲಿ ಬಂಡೆಕಲ್ಲು ಕಂಡುಬಂದಿದ್ದು ಅದನ್ನು ಒಡೆಯಬೇಕಾಗಿದ್ದ ಕಾರಣ ಕಾಮಗಾರಿ ನಿಂತಿತ್ತು. ಬಳಿಕ ಬಂಡೆಕಲ್ಲು ಒಡೆದರೂ ಕಾಮಗಾರಿ ನಡೆಯದೆ ಹಾಗೇ ಉಳಿದಿದ್ದು ಇದೀಗ ಮಳೆಗಾಲ ಎದುರಾದ ಕಾರಣ ನಡೆಯಬೇಕಿದ್ಡ ಕಾಮಗಾರಿ ಕೂಡಾ ಸ್ಥಗಿತಗೊಂಡಿದ್ದು ಜನರು ನಿತ್ಯ ನರಕ ಯಾತನೆ ಅನುಭವಿಸುವಂತಾಗಿದೆ.