ಗಗನಕ್ಕೇರಿದ ದಿನಸಿ ಹಾಗೂ ತರಕಾರಿ ಬೆಲೆ: ಗ್ರಾಹಕರೇ ಇಲ್ಲದಕ್ಕಾಗಿ ವ್ಯಾಪಾರಿಗಳು ಕಂಗಾಲು

ಮೈಸೂರು : ಮುಂಗಾರು ಮಳೆ ಕೈ ಕೊಟ್ಟಿದೆ. ರೈತರು ಹಾಕಿದ ಬಿತ್ತನೆ ಬೀಜಗಳು ಜಮೀನಿನಲ್ಲಿಯೇ ಮಳೆ ಇಲ್ಲದೆ ಒಣಗುತ್ತಿದ್ದರೆ, ಮತ್ತೊಂದು ಕಡೆ ತರಕಾರಿ ಬೆಳೆಯಲು ಮಳೆ ಇಲ್ಲದ ಕಾರಣ ತರಕಾರಿ ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ಇದರಿಂದ ಹಣ್ಣು ಮತ್ತು ತರಕಾರಿಗಳ ಬೆಲೆಯಲ್ಲಿ ಹೆಚ್ಚಳವಾಗಿದೆ. ಕಳೆದ ಒಂದು ವಾರದಿಂದ ತರಕಾರಿ ಬೆಲೆ 100ರ ಗಡಿ ದಾಟಿದೆ. ಇದರಿಂದ ವರ್ತಕರು ಹಾಗೂ ಜನಸಾಮಾನ್ಯರು ಕಂಗಾಲಾಗಿದ್ದಾರೆ.

ಮುಂಗಾರು ಮಳೆ ಕೈ ಕೊಟ್ಟಿದ್ದು, ಅಗತ್ಯ ವಸ್ತುಗಳಾದ ದಿನಸಿ ಹಾಗೂ ತರಕಾರಿ ಬೆಲೆಗಳು ಗಗನಕ್ಕೇರಿವೆ. ಜನಸಾಮಾನ್ಯರು ಕಂಗಾಲಾಗಿದ್ದಾರೆ.‌ ವ್ಯಾಪಾರಸ್ಥರು ವ್ಯಾಪಾರ ಇಲ್ಲದೆ ಬಾಡಿಗೆ ಕಟ್ಟಲು ಸಹ ಪರದಾಡುವ ಪರಿಸ್ಥಿತಿ ಎದುರಾಗಿದೆ‌. ಈ ಕುರಿತು ಪ್ರತ್ಯಕ್ಷ ವರದಿ ಇಲ್ಲಿದೆ. ದಿನಸಿ ಹಾಗೂ ತರಕಾರಿ ಬೆಲೆ ಏರಿಕೆ ಬಗ್ಗೆ ವ್ಯಾಪಾರಸ್ಥರು ಪ್ರತಿಕ್ರಿಯಿಸಿದ್ದಾರೆ . ಮೈಸೂರಿನಲ್ಲಿ ದಿನಸಿ ಹಾಗೂ ತರಕಾರಿ ಬೆಲೆಗಳು ಗಗನಕ್ಕೇರಿವೆ. ಹೀಗಾಗಿ ಜನಸಾಮಾನ್ಯರು ಖರೀದಿಗೆ ಮುಂದೆ ಬರುತ್ತಿಲ್ಲ.

ಇನ್ನು, ಪ್ರತಿನಿತ್ಯ ದಿನಸಿಗಳ ಬೆಲೆ ಕಳೆದ ಒಂದು ವಾರದಿಂದ ಹೆಚ್ಚಾಗಿದ್ದು ಅಕ್ಕಿ, ಜೀರಿಗೆ, ಮೆಣಸಿನಕಾಯಿ, ತೊಗರಿ ಬೇಳೆ ಸೇರಿದಂತೆ ದಿನಸಿ ಪದಾರ್ಥಗಳ ಬೆಲೆಗಳು ಗಗನಮುಖಿಯಾಗಿವೆ. ಇದಕ್ಕೆ ಮೂಲ ಕಾರಣ ಸರಿಯಾದ ಸರಬರಾಜು ಇಲ್ಲದೆ ಇರುವುದು ಒಂದು ಕಡೆಯಾದರೆ, ಮತ್ತೊಂದು ಕಡೆ ಬೆಲೆ ಹೆಚ್ಚಳ ಆಗಿರುವುದು. ಇದರಿಂದ ಖರೀದಿಗೆ ಜನ ಬರುತ್ತಿಲ್ಲ.

ಹೀಗಾಗಿ ಬೆಲೆ ಏರಿಕೆ ಒಂದು ಕಡೆಯಾದರೆ, ಇನ್ನೊಂದು ಕಡೆ ಅಂಗಡಿಯ ಬಾಡಿಗೆ ಕಟ್ಟಲು ಸಹ ತೊಂದರೆ ಆಗಿದೆ ಎಂದು ತಮ್ಮ ಅಳಲನ್ನು ನಗರದ ವ್ಯಾಪಾರಸ್ಥರು ತೋಡಿಕೊಂಡಿದ್ದಾರೆ.

ಮಳೆ ಇಲ್ಲದ ಕಾರಣ ತರಕಾರಿಗಳ ಸರಬರಾಜು ಕಡಿಮೆ ಆಗಿದೆ. ಹೀಗಾಗಿ ತರಕಾರಿ ಬೆಲೆಗಳು ಸಹ ಹೆಚ್ಚಾಗಿದೆ. ಬೇರೆ ಕಡೆಯಿಂದ ತರಕಾರಿಗಳು ಬರುತ್ತಿಲ್ಲ. ಬೀನ್ಸ್​ ಬೆಲೆ ಈಗ ಕೆಜಿಗೆ 100 ರೂ. ಗೆ ತಲುಪಿದೆ. ನಾವು ಆಲೂಗೆಡ್ಡೆಗೆ ಕೆಜಿಗೆ 30 ರೂ.ನಂತೆ ಮಾರುತ್ತಿದ್ದೇವೆ. ಬಜಾರ್​ ಬೆಲೆ 22 ರೂ. ಇದೆ.

ಈರುಳ್ಳಿ 15 ರೂಪಾಯಿ ಇದೆ. ಬೀನ್ಸ್​, ಹಸಿ ಮೆಣಸಿನಕಾಯಿ, ಕಪ್ಪು ಮೆಣಸಿನಕಾಯಿ ಇವೆಲ್ಲಾ ಜಾಸ್ತಿಯಾಗಿದ್ದು, ಜನ ಕೊಂಡುಕೊಳ್ಳಲು ಬರುತ್ತಿಲ್ಲ ಎಂದು ತರಕಾರಿ ವ್ಯಾಪಾರಿ ಜಬೀರ್ ಪಾಷಾ ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ.

ಮಳೆ ಇಲ್ಲದೆ ಸರಿಯಾದ ಸರಬರಾಜಿಲ್ಲದೆ ಕಿರಾಣಿ ಪದಾರ್ಥಗಳು ಹಾಗೂ ತರಕಾರಿ ಬೆಲೆ ಗಗನಕ್ಕೇರಿದ್ದು, ಜನ ಕಿರಾಣಿ ಪದಾರ್ಥಗಳು ಹಾಗೂ ತರಕಾರಿಗಳನ್ನು ಕೊಳ್ಳಲು ಪರದಾಡುತ್ತಿದ್ದಾರೆ.

ವ್ಯಾಪಾರಸ್ಥರು ಹೇಳುವುದೇನು: ಕಳೆದ ಒಂದು ವಾರದಿಂದ ಅಕ್ಕಿ, ಜೀರಿಗೆ, ಬೇಳೆ ಸೇರಿದಂತೆ ಪ್ರಮುಖ ಕಿರಾಣಿ ಪದಾರ್ಥಗಳ ಬೆಲೆ ಹೆಚ್ಚಾಗಿದೆ. ಜೀರಿಗೆ ಕೆಜಿಗೆ 300 ರೂ. ಇದ್ದಿದ್ದು, 650ರಿಂದ 700 ರೂ.ಗೆ ತಲುಪಿದೆ. ಹಾಗೆಯೇ ಅಕ್ಕಿ, ಮೆಣಸಿನಕಾಯಿ ರೇಟ್​ ತುಂಬಾ ಜಂಪ್​ ಆಗಿದೆ. ಮಳೆ ಇಲ್ಲ. ಹಾಗೆಯೇ ಹೊರಗಡೆಯಿಂದ ಪದಾರ್ಥಗಳು ಬರದಿರುವುದು ಇದಕ್ಕೆ ಕಾರಣವಾಗಿದೆ. ಜನರು ಕೊಂಡುಕೊಳ್ಳಲು ಮಾರ್ಕೆಟ್​ಗೆ ಬರುತ್ತಿಲ್ಲ. ಪ್ರತಿದಿನ ಸಂತೆಪೇಟೆ ಭಾನುವಾರದ ರೀತಿ ಆಗಿದೆ. ಜನ ಬಂದರೂ ಬೆಲೆ ಕೇಳಿ ಕೊಂಡುಕೊಳ್ಳದೆ ವಾಪಸ್ ಹೋಗುತ್ತಿದ್ದಾರೆ. ಡಬಲ್​ ರೇಟ್​ ಆಗಿರುವುದರಿಂದ ಜನ ಖರೀದಿಗೆ ಮುಂದಾಗುತ್ತಿಲ್ಲ. ನಮಗೆ ಬಾಡಿಗೆ ಕಟ್ಟಲು ಸಹ ಕಷ್ಟ ಆಗಿದೆ ಎಂದು ಕಿರಾಣಿ ಅಂಗಡಿಯ ಮಾಲೀಕ ನರ್ಪತ್ ಕುಮಾರ್ ತಮ್ಮ ಅಳಲನ್ನ ತೋಡಿಕೊಂಡರು.