ಕಾರ್ಕಳ: ರಾಜ್ಯಾದ್ಯಂತ ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿನ 167 ಡಯಾಲಿಸಿಸ್ ಕೇಂದ್ರಗಳಲ್ಲಿ ಸುಮಾರು 900 ಡಯಾಲಿಸಿಸ್ ಸಿಬ್ಬಂದಿಗಳು ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದರಿ ಡಯಾಲಿಸಿಸ್ ಕೇಂದ್ರದ ಸಿಬ್ಬಂದಿಗಳು ವೇತನ ಹಾಗೂ ಇನ್ನಿತರ ಸೌಲಭ್ಯಗಳಿಗೆ ಆಗ್ರಹಿಸಿ ರಾಜ್ಯಾದ್ಯಂತ ಅನಿರ್ಧಿಷ್ಟಾವಧಿ ಪ್ರತಿಭಟನೆಯನ್ನು ನಡೆಸಲು ತೀರ್ಮಾನಿಸಿರುವುದು ತಿಳಿದುಬಂದಿದೆ.
ಕಾರ್ಕಳ ಸಾರ್ವಜನಿಕ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರದಲ್ಲಿ ಒಟ್ಟು 05 ಜನ ಸಿಬ್ಬಂದಿಗಳು ಕರ್ತವ್ಯನಿರ್ವಹಿಸುತ್ತಿದ್ದು, ಡಯಾಲಿಸಿಸ್ ಕೇಂದ್ರದಲ್ಲಿ ನಿರಂತರವಾಗಿ ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರತಿ ದಿನ ಸುಮಾರು 15 ರಿಂದ 20 ರೋಗಿಗಳು ಡಯಾಲಿಸಿಸ್ಗೆ ಒಳಪಡುತ್ತಿದ್ದು, ಸಿಬ್ಬಂದಿಗಳು ಮುಷ್ಕರದಲ್ಲಿ ಪಾಲ್ಗೊಂಡರೆ ಬಡ ಡಯಾಲಿಸಿಸ್ ರೋಗಿಗಳಿಗೆ ಇದರಿಂದ ತುಂಬಾ ತೊಂದರೆಯಾಗಲಿದೆ.
ಕಾರ್ಕಳ ಸಾರ್ವಜನಿಕ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರ ಸೇರಿದಂತೆ ಉಡುಪಿ ಜಿಲ್ಲಾ ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆಗಳಲ್ಲಿರುವ ಡಯಾಲಿಸಿಸ್ ಕೇಂದ್ರದಲ್ಲಿ ರೋಗಿಗಳಿಗೆ ಯಾವುದೇ ರೀತಿಯ ಅನಾನುಕೂಲವಾಗದಂತೆ, ಕ್ಲಪ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ ದೊರಕಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್ ಪತ್ರ ಮುಖೇನ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.