ವಾಷಿಂಗ್ಟನ್ ಡಿಸಿ: ಕಳೆದ ಮೂರು ದಶಕಗಳಿಂದ ಅಮೇರಿಕಾದ ವಾಷಿಂಗ್ಟನ್ ಡಿಸಿಯಲ್ಲಿ ನೆಲೆಸಿರುವ ಬೈಂದೂರು ಮೂಲದ ಅನಿವಾಸಿ ಭಾರತೀಯ ಆಲೂರು ಆನಂದ್ ಪೂಜಾರಿ ಅವರು ವುಡ್ಲ್ಯಾಂಡ್ಸ್, ಜ್ಯುವೆಲ್ ಆಫ್ ಇಂಡಿಯಾ ಮತ್ತು ಐ.ಬಿ.ಎಚ್ ನಂತಹ ಸಂಸ್ಥೆಗಳ ಪ್ರವರ್ತಕ. ವಾಷಿಂಗ್ಟನ್ ಡಿಸಿಯಲ್ಲಿರುವ ‘ವುಡ್ಲ್ಯಾಂಡ್ಸ್ ರೆಸ್ಟೊರೆಂಟ್’ ಸಸ್ಯಾಹಾರಿ ರೆಸ್ಟೋರೆಂಟ್ ರುಚಿಯನ್ನು ಸವಿಯದ ಭಾರತೀಯ ವಿವಿಐಪಿಗಳು ತೀರಾ ಕಡಿಮೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯಾಗಿರಲಿ ಅಥವಾ ಇನ್ನಾವ ರಾಜತಾಂತ್ರಿಕ ಅಧಿಕಾರಿಯೇ ಆಗಿರಲಿ ಇವರೆಲ್ಲರಿಗೂ ರುಚಿರುಚಿಯಾದ ಸಸ್ಯಾಹಾರಿ ಸವಿ ಭೋಜನ ತಯಾರಾಗುವುದು ಆನಂದ ಪೂಜಾರಿಯವರ ಹೋಟಲಿನಲ್ಲಿಯೆ.
ಈ ಬಾರಿ ಶ್ವೇತಭವನದ ಸೌತ್ ಲಾನ್ನಲ್ಲಿ ವಿಶೇಷವಾಗಿ ಅಲಂಕರಿಸಿದ ಪೆವಿಲಿಯನ್ನಲ್ಲಿ 400 ಕ್ಕೂ ಹೆಚ್ಚು ಅತಿಥಿಗಳಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಪ್ರಧಾನಿ ಮೋದಿಯವರಿಗೆ ಸಸ್ಯಾಹಾರದ ವಿಶೇಷ ಖಾದ್ಯಾನ್ನಗಳನ್ನು ಮುತುವರ್ಜಿಯಿಂದ ಏರ್ಪಡಿಸಲಾಗಿತ್ತು. ಇದರ ಹಿಂದೆ ಆಲೂರ್ ಆನಂದ್ ಪೂಜಾರಿ ಮತ್ತು ಅವರ ಪತ್ನಿ ಸುಮಿತಾ ಅವರ ಅಪಾರ ಶ್ರಮವಿತ್ತು.
ಆಲೂರ್ ಆನಂದ್ ಪೂಜಾರಿ ಮತ್ತು ಅವರ ಪತ್ನಿ ಸುಮಿತಾ ದಂಪತಿಗಳು ಕಳೆದ 35 ವರ್ಷಗಳಿಂದ ವಾಷಿಂಗ್ಟನ್ ಡಿಸಿಯಲ್ಲಿ ನೆಲೆಸಿದ್ದಾರೆ. ಬೈಂದೂರು ತಾಲೂಕಿನ ಆಲೂರು ಗ್ರಾಮದ ಕಲ್ಲಂಗಡಿ ಮನೆಯ ಬದಿಯ ಪೂಜಾರಿ ಮತ್ತು ಗಿರಿಜಾ ದಂಪತಿಯ ಪುತ್ರ ಆನಂದ ಪೂಜಾರಿಯವರು ಜುವೆಲ್ಸ್ ಆಫ್ ಇಂಡಿಯಾ ಎಂಬ ರೆಸ್ಟೋರೆಂಟ್ ಕೂಡಾ ಹೊಂದಿದ್ದು, ಇವರ ಸವಿರುಚಿಯ ಅಡುಗೆಗಳಿಗೆ ಸ್ವತಃ ಅಮೇರಿಕನ್ನರೇ ಮನಸೋತಿದ್ದಾರೆ.