ಉಡುಪಿ: ಕರಾವಳಿಯ ಜನತೆ ಹೆಚ್ಚು ಧೈರ್ಯಶಾಲಿಗಳು, ಬುದ್ದಿವಂತರು ಮತ್ತು ಇತರರಿಗೆ ಸ್ಪೂರ್ತಿ ತುಂಬುವಂತಹವರು ಇಂತಹ ಪ್ರದೇಶದ ಯುವಕ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾದರೆ, ಇಲಾಖೆ ಇನ್ನಷ್ಟು ಉತ್ತಮ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಕೆ.ಎಸ್.ಆರ್.ಪಿ ಯ ಎಡಿಜಿಪಿ ಭಾಸ್ಕರ್ ರಾವ್ ಹೇಳಿದ್ದಾರೆ.
ಅವರು ಗುರುವಾರ ಮಲ್ಪೆಯ ಏಳೂರು ಮೊಗವೀರ ಸಭಾಂಗಣದಲ್ಲಿ, ಕೆ.ಎಸ್.ಆರ್.ಪಿ., ಕರಾವಳಿ ಕಾವಲು ಪಡೆ ಮತ್ತು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ, ಕರಾವಳಿ ತೀರದ ಯುವಕ ಯುವತಿಯರಿಗೆ ಪೊಲೀಸ್ ಇಲಾಖೆಯಲ್ಲಿ ನೇಮಕಾತಿ ಕುರಿತು ನಡೆದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪೊಲೀಸ್ ನೇಮಕಾತಿಯಲ್ಲಿ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಕಳೆದ 4-5 ವರ್ಷಗಳಿಂದ ಸ್ಥಳೀಯ ಅಭ್ಯರ್ಥಿಗಳು ನಿರಾಸಕ್ತಿ ತೋರುತ್ತಿದ್ದು, ಇದರಿಂದ ಬೇರೆ ಜಿಲ್ಲೆಯ ಅಭ್ಯರ್ಥಿಗಳು ನೇಮಕಗೊಳ್ಳುತ್ತಿದ್ದು, ಕಾನೂನು ಸುವ್ಯವಸ್ಥೆಯು ಸ್ಥಳೀಯ ವಿಷಯವಾಗಿದ್ದು, ಇದನ್ನು ನಿಭಾಯಿಸಲು ಸ್ಥಳೀಯರ ಅವಶ್ಯಕತೆ ಹೆಚ್ಚಾಗಿರುತ್ತದೆ, ಬೇರೆ ಜಿಲ್ಲೆಗಳಿಂದ ನೇಮಕಗೊಂಡ ಸಿಬ್ಬಂದಿಗಳು ಸ್ಥಳೀಯ ಭಾಷೆ, ಸ್ಥಳಗಳ ಪರಿಚಯ, ಸಂಸ್ಕøತಿ, ಅರಿಯಲು ಕೆಲವು ವರ್ಷಗಳು ಬೇಕಾಗಿದ್ದು, ಅಷ್ಟರಲ್ಲಿ ತಮ್ಮ ತವರು ಜಿಲ್ಲೆಗೆ ವರ್ಗಾವಣೆಯಾಗಿ ಹೋಗುವುದರಿಂದ ಇಲ್ಲಿ ಹುದ್ದೆಗಳು ಖಾಲಿ ಉಳಿಯಲಿದ್ದು, ಕಾನೂನು ಸುವ್ಯವಸ್ಥೆಗೆ ತೊಡಕಾಗಲಿದೆ ಎಂದರು.
ಪೊಲೀಸ್ ನೇಮಕಾತಿ ಕುರಿತ ಇರುವ ಗೊಂದಲಗಳ ಕುರಿತು ಪ್ರಶ್ನಿಸಿದ ಉದಯ್ ಕೊಮೆ ತೆಕ್ಕಟ್ಟೆ, ಚೈತ್ರಾ ಕಟಪಾಡಿ, ಗೋಪಾಲ ಖಾರ್ವಿ, ಜಯರಾಜ್ ಬೈಂದೂರು ಅವರ ಪ್ರಶ್ನೆಗಳಿಗೆ ಉತ್ತರಿಸಿದ ಭಾಸ್ಕರ್ ರಾವ್, ಇಲಾಖೆಯ ನೇಮಕಾತಿ ಸಂಪೂರ್ಣ ಪಾರದರ್ಶಕವಾಗಿದ್ದು, ಪ್ರತಿಯೊಂದು ಆಯ್ಕೆ ಪ್ರಕ್ರಿಯೆ ಸಹ ವೀಡಿಯೋ ದಾಖಲೀಕರಣ ಮಾಡಲಾಗುತ್ತದೆ, ಅಭ್ಯರ್ಥಿಗಳ ಎತ್ತರ, ತೂಕವನ್ನು ಎಲೆಕ್ಟ್ರಾನಿಕ್ ಯಂತ್ರದ ಮೂಲಕ ಮಾಡಲಾಗುತ್ತಿದ್ದು, ಲಿಖಿತ ಪರೀಕ್ಷೆಯ ಫಲಿತಾಂಶವನ್ನೂ ಕಂಪ್ಯೂಟರೀಕರಣಗೊಳಿಸಿದ್ದು ಯಾವುದೇ ವ್ಯಕ್ತಿಗಳ ಮಧ್ಯ ಪ್ರವೇಶ ಇಲ್ಲವಾಗಿದ್ದು, ಕರ್ನಾಟಕ ಪೊಲೀಸ್ ನೇಮಕಾತಿ ಪ್ರಕ್ರಿಯೆ ಇಡೀ ದೇಶಕ್ಕೆ ಮಾದರಿಯಾಗಿದ್ದು, ಈ ಆಯ್ಕೆ ಪಟ್ಟಿಯ ಕುರಿತು ನ್ಯಾಯಾಲಯದಲ್ಲಿ ಸಹ ಯಾವುದೇ ತಡೆ ಇದುವರೆಗೆ ಬಂದಿಲ್ಲ, ನೇಮಕಾತಿ ಕುರಿತಂತೆ ಗ್ರಾಮ ಮಟ್ಟದಲ್ಲಿ ಮತ್ತು ಕಾಲೇಜುಗಳಲ್ಲಿ ಸಹ ಮಾಹಿತಿ ನೀಡುವ ಕಾರ್ಯಕ್ರಮ ಏರ್ಪಡಿಸುವುದಾಗಿ ಹೇಳಿದರು.
ಕಾರ್ಯಕ್ರಮದ ಆದ್ಯಕ್ಷತೆ ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಾಸನ ಕೆ.ಎಸ್.ಆರ್.ಪಿ ಕಮಾಂಡೆಂಟ್ ಕೃಷ್ಣಪ್ಪ, ಮಂಗಳೂರು ಕೆ.ಎಸ್.ಆರ್.ಪಿ ಕಮಾಂಡೆಂಟ್ ಜನಾರ್ಧನ್, ಉಡುಪಿ ಎಎಸ್ಪಿ ಕುಮಾರ ಚಂದ್ರ, ಮೀನುಗಾರಿಕಾ ಫೆಡರೇಷನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ಪಾಶ್ರ್ವನಾಥ್, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ಉಪಸ್ಥಿತರಿದ್ದರು.
ಕರಾವಳಿ ಕಾವಲು ಪಡೆಯ ಇನ್ಸ್ಪೆಕ್ಟರ್ ಪ್ರಮೋದ್ ಕುಮಾರ್ ಸ್ವಾಗತಿಸಿದರು, ಉಡುಪಿ ಡಿವೈಎಸ್ಪಿ ಜೈ ಶಂಕರ್ ವಂದಿಸಿದರು. ಕರಾವಳಿ ಕಾವಲು ಪಡೆಯ ಎಎಸೈ ಮನಮೋಹನ್ ನಿರೂಪಿಸಿದರು.