ಕೋಟೇಶ್ವರ: ವೇದಮೂರ್ತಿ ಮಂಜುನಾಥ್ ಭಟ್ (ಅಪ್ಪಾ ಭಟ್) 24 ಜೂನ್ ಶನಿವಾರ ಬೆಂಗಳೂರಿನಲ್ಲಿ ಬೆಳಿಗ್ಗೆ ನಿಧನರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು.
ಕೋಟೇಶ್ವರ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ಹಲವು ವರ್ಷಗಳ ಕಾಲ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು. ಕಾಶೀಮಠದ ಮಂಗಳೂರು ಶ್ರೀ ಶ್ರೀನಿವಾಸ ನಿಗಮಾಗಮ ವೇದ ಪಾಠ ಶಾಲಾ ಪ್ರಾಂಶುಪಾಲರಾಗಿ ವೇದ ವಿದ್ಯಾರ್ಥಿಗಳಿಗೆ ಮೂರು ವಿಧದ ಪರೀಕ್ಷೆ ನಡೆಸಿ ಪುರೋಹಿತ ರತ್ನ , ಪುರೋಹಿತ, ಅರ್ಚಕ ಪದವಿ ನೀಡಿದ್ದರು. ದೇವಳದಲ್ಲಿ ನಡೆಯುವ ವಿಶೇಷ ಯಾಗ ಯಜ್ಞಾದಿಗಳಿಗೆ ಪ್ರಧಾನ ಆಚಾರ್ಯತ್ವದಲ್ಲಿ (ತಂತ್ರಿ) ಸಹಸ್ರ ಕುಂಭಾಭಿಷೇಕ, ಅತೀ ರುದ್ರಯಾಗ , ಸಹಸ್ರ ಚಂಡಿಕಾಯಾಗ ನಡೆಸಿ ಧಾರ್ಮಿಕ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ್ದರು.
ಉಡುಪಿ ಅನಂತ ವೈದಿಕ ಕೇಂದ್ರದ ಮಾರ್ಗದರ್ಶಕರಾಗಿ ಧಾರ್ಮಿಕ ಸಿಡಿಗಳು ಹಾಗೂ ಪುಸ್ತಕಗಳ ರಚನೆಗೆ ಸಹಕರಿಸಿದ್ದರು. ಕೋಟೇಶ್ವರ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ಮಕ್ಕಳಿಗೆ ಹಾಗೂ ಸರ್ವ ಸಮಾಜ ಬಾಂಧವರಿಗೆ ಶ್ಲೋಕಗಳನ್ನು ಹೇಳಿ ಕೊಟ್ಟಿದ್ದರು. ಬೆಂಗಳೂರಿನ ಕಾಶೀಮಠದಲ್ಲಿ ಭಕ್ತರಿಗೆ ವೇದ ಮಂತ್ರ ಶಿಕ್ಷಣ ನೀಡುತ್ತಿದ್ದ ಇವರು ಉಡುಪಿ ಜಿಲ್ಲೆ ಸಹಿತ ರಾಜ್ಯದ ಸರ್ವ ಸಮಾಜ ಬಾಂಧವರ ಜನಮನ್ನಣೆ ಗಳಿಸಿದ್ದರು.