ಪಟ್ನಾ: ಪ್ರಧಾನಿ ನರೇಂದ್ರ ಮೋದಿಯವರ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ವಿರುದ್ಧ ಐಕ್ಯರಂಗವನ್ನು ರಚಿಸಲು ಭಾರತದ 17 ರಾಜಕೀಯ ಪಕ್ಷಗಳ ನಾಯಕರು ಶುಕ್ರವಾರ ಒಪ್ಪಿಕೊಂಡಿದ್ದಾರೆ.
“ನಮ್ಮ ನಡುವೆ ಖಂಡಿತವಾಗಿಯೂ ಕೆಲವು ಭಿನ್ನಾಭಿಪ್ರಾಯಗಳಿವೆ ಆದರೆ ನಾವು ಒಟ್ಟಿಗೆ ಕೆಲಸ ಮಾಡುತ್ತೇವೆ, ಹೊಂದಿಕೊಳ್ಳುವಿಕೆಯೊಂದಿಗೆ ಕೆಲಸ ಮಾಡುತ್ತೇವೆ ಎಂದು ನಾವು ನಿರ್ಧರಿಸಿದ್ದೇವೆ” ಎಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಬಿಹಾರದ ರಾಜಧಾನಿ ಪಾಟ್ನಾದಲ್ಲಿ ನಡೆದ ಈ ಸಭೆಯನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಆಯೋಜಿಸಿದ್ದರು. ದೇಶದ ಪ್ರಮುಖ ಪಕ್ಷಗಳ ಘಟಾನುಘಟಿ ನಾಯಕರು ಭಾಗವಹಿಸಿದ್ದರು.
ದೇಶದ ಹಿತದೃಷ್ಟಿಯಿಂದ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಎಲ್ಲರೂ ಒಪ್ಪಿಕೊಂಡಿದ್ದಾರೆ ಎಂದು ಜನತಾದಳ-ಯುನೈಟೆಡ್ ಪಾರ್ಟಿಯ ನಿತೀಶ್ ಕುಮಾರ್ ಹೇಳಿದ್ದಾರೆ. ಒಟ್ಟಿಗೆ ಚುನಾವಣೆ ಎದುರಿಸಲು ನಮ್ಮೆಲ್ಲರಿಗೂ ಒಪ್ಪಿಗೆ ಇದೆ ಎಂದಿದ್ದಾರೆ.
ಈ ಸಭೆಯು ನರೇಂದ್ರ ಮೋದಿಯವರನ್ನು ಯಾವುದೇ ಕಾರಣಕ್ಕೂ ಮೂರನೇ ಅವಧಿಗೆ ಪ್ರಧಾನಿಯಾಗುವುದನ್ನು ತಡೆಯಲು ರೂಪಿಸಬೇಕಾದ ರಣತಂತ್ರಗಳ ಮೇಲೆ ಕೇಂದ್ರಿಕೃತವಾಗಿತ್ತು.
ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಕಾರ್ಯತಂತ್ರವನ್ನು ರೂಪಿಸಲು ಮುಂದಿನ ತಿಂಗಳು ಈ ಎಲ್ಲಾ ಪಕ್ಷಗಳು ಮತ್ತೆ ಸಭೆ ಸೇರಲಿವೆ. ವಿರೋಧ ಪಕ್ಷಗಳ ನಡುವಿನ ಮತಗಳ ವಿಭಜನೆಯಿಂದ ಬಿಜೆಪಿಗೆ ಲಾಭವಾಗುವುದನ್ನು ತಡೆಯಲು ದೇಶಾದ್ಯಂತ ಕೆಲವು ಕ್ಷೇತ್ರಗಳಲ್ಲಿ ಜಂಟಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಬಿಜೆಪಿಗೆ ಏಟು ನೀಡುವ ರಣತಂತ್ರವನ್ನು ಹೆಣೆಯಲಾಗುವುದು ಎನ್ನಲಾಗಿದೆ.
ಏತನ್ಮಧ್ಯೆ, ಐಕ್ಯರಂಗ ಒಕ್ಕೂಟವನ್ನು ಫೋಟೋ ಒಪ್ ಎಂದಿರುವ ಬಿಜೆಪಿ, ಇದೊಂದು “ನಿಷ್ಫಲ ಕಸರತ್ತು” ಎಂದು ತಳ್ಳಿಹಾಕಿದೆ.