ಜುಲೈ 12ರಿಂದ ಡೊಮಿನಿಕಾದಲ್ಲಿ ಆರಂಭವಾಗಲಿರುವ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾರತ ಟೆಸ್ಟ್ ಕ್ರಿಕೆಟ್ ತಂಡದಲ್ಲಿ ರುತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್ ಮತ್ತು ಮುಖೇಶ್ ಕುಮಾರ್ ಅವರಿಗೆ ಇದೇ ಮೊದಲ ಬಾರಿಗೆ ಅವಕಾಶ ದೊರೆತಿದೆ.ಭಾರತದ 2023-25ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪ್ರವಾಸದ ಆರಂಭಿಕ ಪಂದ್ಯಗಳಿಗೆ ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ.
18 ತಿಂಗಳ ನಂತರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಅಜಿಂಕ್ಯ ರಹಾನೆ ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಅವರಿಗೆ ಉಪನಾಯಕನ ಸ್ಥಾನ ದೊರತಿದೆ.
ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಪುರುಷರ ಆಯ್ಕೆ ಸಮಿತಿ ಪ್ರಕಟಿಸಿದ ತಂಡದಲ್ಲಿ, ಚೇತೇಶ್ವರ ಪೂಜಾರ, ಉಮೇಶ್ ಯಾದವ್ ಮತ್ತು ಮೊಹಮ್ಮದ್ ಶಮಿಗೆ ಅವಕಾಶ ಸಿಕ್ಕಿಲ್ಲ. ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದ ಗಾಯಕ್ವಾಡ್ ಮತ್ತು ಜೈಸ್ವಾಲ್ ತಮ್ಮ ಬ್ಯಾಟಿಂಗ್ ಲೈನಪ್ನಲ್ಲಿ ಪರಿವರ್ತನೆ ಮಾಡಿಕೊಳ್ಳಬೇಕಾಗುತ್ತದೆ. ಏಕೆಂದರೆ, ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಅಜಿಂಕ್ಯ ರಹಾನೆಗೆ ಟೆಸ್ಟ್ನಲ್ಲಿ ಉಪನಾಯಕನ ಸ್ಥಾನ ನೀಡಲಾಗಿದೆ. ಆದರೆ ನಿರೀಕ್ಷೆಯಂತೆ ಅಯ್ಯರ್ ಮತ್ತು ಕೆ.ಎಲ್.ರಾಹುಲ್ ಈ ಪಂದ್ಯಗಳಿಗೆ ಫಿಟ್ ಆಗಿಲ್ಲ.
ಟೆಸ್ಟ್ ಸರಣಿಯ ನಂತರ ಮೂರು ಪಂದ್ಯಗಳ ಏಕದಿನ ಸರಣಿಗೆ ರುತುರಾಜ್ ಮತ್ತು ಮುಖೇಶ್ ಸಹ ತಂಡದ ಭಾಗವಾಗಲಿದ್ದಾರೆ. ಸಂಜು ಸ್ಯಾಮ್ಸನ್ ಎರಡನೇ ವಿಕೆಟ್ ಕೀಪರ್ ಕಮ್ ಬ್ಯಾಟರ್ ಆಗಿ ಆಯ್ಕೆಯಾಗಿದ್ದಾರೆ. ಇದೇ ಪ್ರವಾಸದಲ್ಲಿ ಭಾರತವು ಐದು ಟಿ20 ಪಂದ್ಯಗಳನ್ನು ಆಡಲಿದೆ. ಇದಕ್ಕೆ ಬಿಸಿಸಿಐ ತಂಡ ಪ್ರಕಟಿಸಿಲ್ಲ.
ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆ.ಎಸ್. ಭರತ್ (ವಿಕೆಟ್-ಕೀಪರ್), ಇಶಾನ್ ಕಿಶನ್ (ವಿಕೆಟ್-ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನದ್ಕತ್, ನವದೀಪ್ ಸೈನಿ.
ಭಾರತ ಏಕದಿನ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಯುಜ್ವೇಂದ್ರ ಚಹಾಲ್, ಕುಲದೀಪ್ ಯಾದವ್, ಜಯದೇವ್ ಉನದ್ಕತ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್.
ಡೊಮಿನಿಕಾದ ವಿಂಡ್ಸರ್ ಪಾರ್ಕ್ ಮೊದಲ ಟೆಸ್ಟ್ ಪಂದ್ಯ ಜುಲೈ 12-16 ರವರೆಗೆ, ಎರಡನೇ ಟೆಸ್ಟ್ ಜುಲೈ 20-24 ರವರೆಗೆ ಟ್ರಿನಿಡಾಡ್ನ ಕ್ವೀನ್ಸ್ ಪಾರ್ಕ್ ಓವಲ್ನಲ್ಲಿ ನಡೆಯಲಿದೆ. ಎರಡನೇ ಟೆಸ್ಟ್ ಪಂದ್ಯವು ಭಾರತ- ವೆಸ್ಟ್ ಇಂಡೀಸ್ ನಡುವಿನ 100ನೇ ಟೆಸ್ಟ್ ಪಂದ್ಯವಾಗಲಿದೆ. ಮೊದಲ ಎರಡು ಏಕದಿನ ಪಂದ್ಯಗಳು ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ನಲ್ಲಿ ಜುಲೈ 27 ಮತ್ತು 29 ರಂದು ನಡೆಯಲಿವೆ. ಮೂರನೇ ಪಂದ್ಯ ಆಗಸ್ಟ್ 1ರಂದು ಟ್ರಿನಿಡಾಡ್ನ ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿಯಲ್ಲಿ ನಿಗದಿಯಾಗಿದೆ.