ಮುರುಕಲು ಗುಡಿಸಲಿನ 90ರ ವೃದ್ದೆಗೆ ಮೇ ತಿಂಗಳ ಕರೆಂಟ್ ಬಿಲ್ 1 ಲಕ್ಷ ರೂ! ತಾಂತ್ರಿಕ ದೋಷದಿಂದ ಬಿಲ್ ನಲ್ಲಿ ಗಡಿಬಿಡಿ

ಕೊಪ್ಪಳ: ಇಲ್ಲಿನ 90 ವರ್ಷದ ವೃದ್ದೆಗೆ ಮೇ ತಿಂಗಳ ತನ್ನ ವಿದ್ಯುತ್ ಬಿಲ್ ಅನ್ನು ಕಂಡು ಜೀವಮಾನದ ಆಘಾತಕ್ಕೆ ಒಳಗಾಗಿದ್ದಾರೆ.

ಕೊಪ್ಪಳದ ಭಾಗ್ಯನಗರದ ಮುರುಕಲು ಗುಡಿಸಿಲಿನಲ್ಲಿ ಕೇವಲ ಎರಡು ಎಲ್.ಇ.ಡಿ ಬಲ್ಬ್ ಮಾತ್ರ ಹೊಂದಿರುವ ಗಿರಿಜಮ್ಮ ಎನ್ನುವ 90 ವರ್ಷದ ವೃದ್ದೆಗೆ ಮೇ ತಿಂಗಳ ವಿದ್ಯುತ್ ಬಿಲ್ 1,03,315 ರೂ ಬಂದಿದ್ದು ವೃದ್ದೆಯು ಆಘಾತಕ್ಕೆ ಒಳಗಾಗಿದ್ದಾರೆ. ಪ್ರತಿ ತಿಂಗಳೂ 70-80 ರೂ ವಿದ್ಯುತ್ ಬಿಲ್ ಬರುತ್ತಿದ್ದು, ಮೇ ತಿಂಗಳಲ್ಲಿ ಏಕಾಏಕಿ 1 ಲಕ್ಷಕ್ಕೂ ಮಿಕ್ಕಿ ಬಿಲ್ ಬಂದಿರುವುದನ್ನು ಕಂಡು ಅವರು ಹೌಹಾರಿದ್ದಾರೆ.

ಸ್ಲಮ್ ಗಳಲ್ಲಿ ವಾಸವಾಗಿರುವ ಬಡತನ ರೇಖೆಗಿಂತ ಕೆಳಗಿರುವವರಿಗಾಗಿ ಭಾಗ್ಯ ಜ್ಯೋತಿ ಯೋಜನೆಯಡಿ ನೀಡಲಾಗುವ ವಿದ್ಯುತ್ ಸಂಪರ್ಕವನ್ನು ಗಿರಿಜಮ್ಮ ಪಡೆದಿದ್ದಾರೆ.

1 ಲಕ್ಷಕ್ಕೂ ಮಿಕ್ಕಿ ಬಿಲ್ ಬಂದಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಮೀಟರ್ ನಲ್ಲಿ ತಾಂತ್ರಿಕ ದೋಷ ಮತ್ತು ಮೀಟರ್ ಓದಲು ಬಂದಿದ್ದ ವ್ಯಕ್ತಿಯ ಕಣ್ತಪ್ಪಿನಿಂದಾಗಿ ಈ ರೀತಿ ಬಿಲ್ ಬಂದಿದೆ. ಆಕೆ ವಿದ್ಯುತ್ ಬಿಲ್ ಪಾವತಿಸುವ ಅಗತ್ಯವಿಲ್ಲ ಮತ್ತು ದೋಷವನ್ನು ಸರಿಪಡಿಸಲಾಗುವುದು ಎಂದು ಅಧಿಕಾರಿಗಳು ಆಕೆಗೆ ತಿಳಿಸಿರುವುದಾಗಿ ವರದಿಯಾಗಿದೆ.