ನ್ಯೂಯಾರ್ಕ್: ನಾಪತ್ತೆಯಾದ ಸಬ್‌ಮರ್ಸಿಬಲ್ ಟೈಟಾನಿಕ್ ಹಡಗಿನಲ್ಲಿದ್ದ ಐವರು ಸಿಬ್ಬಂದಿಗಳು “ದುರಂತ ಸ್ಫೋಟ” ದಲ್ಲಿ ಸಾವನ್ನಪ್ಪಿದ್ದಾರೆ ಎಂದು ಯುಎಸ್ ಕೋಸ್ಟ್ ಗಾರ್ಡ್ ದೃಢಪಡಿಸಿದೆ.
ಓಶನ್ ಗೇಟ್ಸ್ ಎಕ್ಸ್‌ಪೆಡಿಶನ್ಸ್ ಸಿಇಒ ಸ್ಟಾಕ್‌ಟನ್ ರಶ್, ಪಾಕಿಸ್ತಾನಿ ಉದ್ಯಮಿ ಶಹಜಾದಾ ದಾವೂದ್ ಮತ್ತು ಅವರ ಮಗ ಸುಲೇಮಾನ್, ಬ್ರಿಟಿಷ್ ಬಿಲಿಯನೇರ್ ಹಮೀಶ್ ಹಾರ್ಡಿಂಗ್ ಮತ್ತು ಫ್ರೆಂಚ್ ಸಾಹಸಿ ಪಾಲ್-ಹೆನ್ರಿ ನರ್ಜಿಯೊಲೆಟ್ ಅವರು ಟೈಟಾನಿಕ್ ನೋಡಲು ಸಬ್ ಮರೀನ್ ನಲ್ಲಿ ತೆರಳಿದ್ದರು. ಭಾನುವಾರದಂದು 4,000ಮೀ ಡೈವ್‌ನಲ್ಲಿ ಎರಡು ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಬೆಂಬಲ ಹಡಗಿನೊಂದಿಗಿನ ಸಂವಹನವನ್ನು ಟೈಟಾನಿಕ್ ಸಬ್ ಮರೀನ್ ಕಳೆದುಕೊಂಡಿತು.
ರಿಮೋಟ್‌ನಿಂದ ಚಾಲಿತ ವಾಹನ (ROV) ಗುರುವಾರ ಬೆಳಿಗ್ಗೆ ಟೈಟಾನಿಕ್ ಅವಶೇಷಗಳ 500 ಮೀ ದೂರದಲ್ಲಿ ಸಮುದ್ರತಳದಲ್ಲಿ ಸಬ್ ಮರೀನ್ ನ ತುಣುಕುಗಳನ್ನು ಪತ್ತೆ ಮಾಡಿದೆ ಎಂದು ಫಸ್ಟ್ ಕೋಸ್ಟ್ ಗಾರ್ಡ್ ಡಿಸ್ಟ್ರಿಕ್ಟ್ ಕಮಾಂಡರ್ ರಿಯರ್ ಅಡ್ಮಿರಲ್ ಜಾನ್ ಮೌಗರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಅವಶೇಷಗಳನ್ನು ವಿಶ್ಲೇಷಿಸಿ ಇವು ಟೈಟಾನಿಕ್ ಗೆ ಸೇರಿದವು ಎಂದು ದೃಢಪಡಿಸಲಾಗಿದೆ ಮತ್ತು ಕುಟುಂಬ ಸದಸ್ಯರಿಗೆ ಯಾರೂ ಕೂಡಾ ಬದುಕುಳಿದಿಲ್ಲ ಎಂದು ತಿಳಿಸಲಾಗಿದೆ.
ಮೃತರ ಶವಗಳು ಎಂದಿಗೂ ಪತ್ತೆಯಾಗುವುದಿಲ್ಲ ಎಂದು ಅಡ್ಮಿರಲ್ ಮೌಗರ್ ಹೇಳಿದರು.
ಭಾನುವಾರ ಬೆಳಗ್ಗೆ ಕೇಪ್ ಕಾಡ್ ತೀರದಿಂದ 900 ಮೈಲುಗಳಷ್ಟು ದೂರದಲ್ಲಿರುವ ಪೋಲಾರ್ ಪ್ರಿನ್ಸ್ ಐಸ್ ಬ್ರೇಕರ್ ಸಂಶೋಧನಾ ಹಡಗಿನಿಂದ ಬಿಡುಗಡೆಗೊಂಡ 105 ನಿಮಿಷಗಳ ನಂತರ ಟೈಟಾನ್ ಸಬ್ಮರ್ಸಿಬಲ್ ಕಣ್ಮರೆಯಾಗಿತ್ತು. ಟೈಟಾನಿಕ್ ನ ಅವಳಿ ಸಂವಹನ ವ್ಯವಸ್ಥೆಗಳು ಬೆಂಬಲ ಹಡಗಿನೊಂದಿಗೆ ಸಂವಹನ ಮಾಡುವುದನ್ನು ಇದ್ದಕ್ಕಿದ್ದಂತೆ ನಿಲ್ಲಿಸಿದ್ದವು. ಸಬ್ ಮರೀನ್ ಪತ್ತೆಗಾಗಿ ವ್ಯಾಪಕ ಪತ್ತೆ ಕಾರ್ಯಾಚರಣೆಗಳನ್ನು ನಡೆಸಲಾಗಿತ್ತು.
ಟೈಟಾನಿಕ್ ಹಡಗು ಮುಳುಗಿದ ನೂರು ವರ್ಷಗಳ ಬಳಿಕ ಮತ್ತದೇ ಜಾಗದಲ್ಲಿ ಮತ್ತೊಂದು ದುರಂತವು ಇಡೀ ಜಗತ್ತಿನಲ್ಲಿ ತಲ್ಲಣ ಸೃಷ್ಟಿಸಿದೆ.