ಅಧಿಕಾರಕ್ಕೆ ಬರುತ್ತಲೇ ಜನರಿಗೆ ಬೆಲೆಯೇರಿಕೆಯ ಬರೆ ಹಾಕಿದ ಕಾಂಗ್ರೆಸ್: ಸಿ.ಟಿ.ರವಿ

ಉಡುಪಿ: ಅಧಿಕಾರದಲ್ಲಿರುವ ಕಾಂಗ್ರೆಸ್ ಬೆಲೆ ಏರಿಕೆಯ ಮೂಲಕ ಜನತೆಗೆ ಮೋಸ ಮಾಡಿದೆ. ಸದ್ದಿಲ್ಲದೆ ಬೆಲೆ ಏರಿಕೆಗೆ ಮುಂದಾಗಿರುವ ಸರ್ಕಾರ ವಿದ್ಯುತ್ ಹಾಗೂ ಮದ್ಯದ ದರ ಹೆಚ್ಚಿಸಿದೆ. ಮುಂದೆ ನೋಂದಣಿ ಶುಲ್ಕ ಹೆಚ್ಚಿಸಲು ಸಿದ್ಧತೆ ಮಾಡಿಕೊಂಡಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

ಗುರುವಾರ ಹೋಟೆಲ್ ಕಿದಿಯೂರು ಶೇಷಶಯನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅನ್ನಭಾಗ್ಯ ಯೋಜನೆ ಕೊಟ್ಟಿದ್ದು ನಾನೇ ಎಂದು ಹೇಳಿಕೊಳ್ಳುತ್ತಿದ್ದರು. ಈಗ ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ ಎಂದು ದೂರುತ್ತಿದ್ದಾರೆ. ಮೋದಿ ಹೆಸರಿನಲ್ಲಿ ಸಿದ್ದರಾಮಯ್ಯ ಜಾತ್ರೆ ಮಾಡಲು ಹೊರಟಿದ್ದಾರೆ. ಚುನಾವಣೆಗೆ ಮುನ್ನ ಕಾಂಗ್ರೆಸ್ ನೀಡಿದ್ದ ಎಲ್ಲ ಗ್ಯಾರಂಟಿಗಳನ್ನು ಈಡೇರಿಸಬೇಕು. ಕೊಟ್ಟ ಮಾತಿಗೆ ತಪ್ಪಿದರೆ ಮತದಾರ ಸಹಿಸುವುದಿಲ್ಲ. ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಮತಾಂತರ ಹಾಗೂ ಗೋಹತ್ಯೆ ನಿಷೇಧ ಕಾಯ್ದೆ ಹಿಂಪಡೆಯುವ ನಿರ್ಧಾರದ ಮೂಲಕ ಕಾಂಗ್ರೆಸ್ ಸರ್ಕಾರ ಔರಂಗಜೇಬನ ಆಡಳಿತ ನಡೆಸುತ್ತಿದ್ದು, ಸಮಾಜಕ್ಕೆ ಕೆಟ್ಟ ಸಂದೇಶ ರವಾನೆ ಮಾಡಿದೆ.

ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ಆಕಾಶ, ಭೂಮಿ, ಪಾತಾಳದಲ್ಲೂ ಸ್ಕ್ಯಾಮ್(ಹಗರಣ) ನಡೆಸಿತ್ತು. ಆದರೆ, ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ 9 ವರ್ಷಗಳ ಆಡಳಿತದಲ್ಲಿ ಸ್ಕ್ಯಾಮ್ ಗಳ ಬದಲಾಗಿ ಸ್ಕೀಮ್ (ಯೋಜನೆ)ಗಳಿಗೆ ಒತ್ತುನೀಡಲಾಯಿತು.

ಜನಧನ್ ನಿಂದ ತೊಡಗಿ ಉಜ್ವಲ, ಮುದ್ರಾ, ಕಿಸಾನ್ ಸಮ್ಮಾನ್, ಪಿಎಂ ಆವಾಸ್, ಸ್ಟಾರ್ಟ್ ಅಪ್ ಇಂಡಿಯಾ, ಆಯುಷ್ಮಾನ್ ಭಾರತ್ ನಂಥ ಯೋಜನೆಗಳನ್ನು ಜಾರಿಗೊಳಿಸಿದೆ. 371 ವಿಧಿ ರದ್ದು, ದೇಶದ ಭವ್ಯ ಸಾಂಸ್ಕೃತಿಕ ಪುನರುತ್ಥಾನ. 390 ಹೊಸ ವಿಶ್ವವಿದ್ಯಾಲಯಗಳು, 225 ಮೆಡಿಕಲ್ ಕಾಲೇಜು, 23 ಏಮ್ಸ್, ತಲಾ 7 ಐಐಟಿ, ಐಐಎಂ, 75 ವಿಮಾನ ನಿಲ್ದಾಣಗಳು, ಡಿಫೆನ್ಸ್ ಕಾರಿಡಾರ್, ಕೈಗಾರಿಕಾ ಕಾರಿಡಾರ್, ಸಾಗರ ಮಾಲಾ ಯೋಜನೆ ಅನುಷ್ಠಾನ ಹೀಗೆ ಬಿಜೆಪಿ ಆಡಳಿತದಲ್ಲಿ ದೇಶ ಪ್ರಗತಿಯ ಹಾದಿಯಲ್ಲಿ ವೇಗದಲ್ಲಿ ಸಾಗುತ್ತಿದೆ. ಬಿಜೆಪಿ ಆಡಳಿತದಲ್ಲಿ ಬ್ಯಾಂಕ್ ಗಳು ಉದ್ಯಮಿಗಳಿಗೆ ಶಿಫಾರಸು ಪತ್ರ ನೋಡಿ ಸಾಲು ಕೊಡುವುದಿಲ್ಲ. ಬದಲಾಗಿ ವ್ಯವಹಾರ, ಸಿಬಿಲ್ ಸ್ಕೋರ್ ನೋಡಿ ಸಾಲ ಕೊಡುತ್ತವೆ ಎಂದರು.

ಮಾಜಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಾಜಿ‌ ಗೃಹಸಚಿವ ಆರಗ ಜ್ಣಾನೇಂದ್ರ, ಮಂಗಳೂರು ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಶಾಸಕರಾದ ಯಶಪಾಲ್ ಸುವರ್ಣ, ಗುರುರಾಜ ಶೆಟ್ಟಿ ಗಂಟಿಹೊಳೆ, ಕಿರಣ್ ಕೊಡ್ಗಿ ಮತ್ತು ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮುಖಂಡರಾದ ಕುತ್ಯಾರು ನವೀನ್ ಶೆಟ್ಟಿ, ದಿನಕರ ಬಾಬು, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಶಿಲ್ಪಾ ಜಿ. ಸುವರ್ಣ ಮೊದಲಾದವರಿದ್ದರು.

ಸದಾನಂದ ಉಪ್ಪಿನಕುದ್ರು ಮತ್ತು ಮನೋಹರ್ ಎಸ್. ಕಲ್ಮಾಡಿ ನಿರೂಪಿಸಿದರು. ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್ ವಂದಿಸಿದರು.