ನಟ ಶಿವರಾಜ್​ಕುಮಾರ್​ ದಂಪತಿಯಿಂದ ಜೂ. 24ಕ್ಕೆ ಗ್ಲೋಬಲ್ ಮಾಲ್ ಡಿವೈನಿಟಿ ಉದ್ಘಾಟನೆ

ಬೆಂಗಳೂರು: ಬೆಂಗಳೂರಿನ ಪಂತರಪಾಳ್ಯದ ಮೈಸೂರು ರಸ್ತೆಯಲ್ಲಿ (ನಾಯಂಡಹಳ್ಳಿ ಮೆಟ್ರೋ ನಿಲ್ದಾಣದ ಬಳಿ) ಗ್ಲೋಬಲ್ ಡಿವೈನಿಟಿ ಮಾಲ್ ಇದೇ ಜೂನ್ 24 ರಂದು ಸಂಜೆ 5.30ಕ್ಕೆ ಉದ್ಘಾಟನೆಗೊಳ್ಳಲಿದೆ.

ಸಿಲಿಕಾನ್​ ಸಿಟಿ, ಉದ್ಯಾನನಗರಿ ಎಂದೇ ಪ್ರಸಿದ್ಧಿ ಪಡೆದಿರುವ ಬೆಂಗಳೂರಿನಲ್ಲಿ ವಿಶ್ವದರ್ಜೆಯ ಗ್ಲೋಬಲ್ ಡಿವಿನಿಟಿ ಮಾಲ್ ಉದ್ಘಾಟನೆಗೆ ಸಜ್ಜಾಗಿದೆ.ಡಿಸಿಎಂ ಡಿಕೆಶಿ ಮಾಲೀಕತ್ವದ ಗ್ಲೋಬಲ್ ಡಿವೈನಿಟಿ ಮಾಲ್ ಜೂನ್ 24 ರಂದು ಉದ್ಘಾಟನೆಗೊಳ್ಳಲಿದೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಗಣ್ಯರಿಗೆ ಆಹ್ವಾನ ನೀಡಲಾಗಿದೆ.

ಖ್ಯಾತ ನಟ, ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಹಾಗೂ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಬುಧವಾರ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಸಚಿವ ಮಧು ಬಂಗಾರಪ್ಪ, ಉಷಾ ಶಿವಕುಮಾರ್ ಅವರು ಉಪಸ್ಥಿತರಿದ್ದರು.

ಇದೇ ಸಂದರ್ಭ ಡಿ.ಕೆ. ಶಿವಕುಮಾರ್‌ ಅವರು ಶಿವರಾಜ್​ಕುಮಾರ್​ ದಂಪತಿಯನ್ನು ಮಾಲ್‌ ಉದ್ಘಾಟನಾ ಸಮಾರಂಭಕ್ಕೆ ಬರುವಂತೆಯೂ ಆಹ್ವಾನಿಸಿದ್ಧಾರೆ.

ಡಿಸಿಎಂ ಡಿ ಕೆ ಶಿವಕುಮಾರ್, ಖ್ಯಾತ ಚಿತ್ರ ನಟರಾದ ಕಿಚ್ಚ ಸುದೀಪ್, ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಸಮುದಾಯದ ಅವಶ್ಯಕತೆಗಳನ್ನು ಪೂರೈಸಲು ಬಹಳ ಆಕರ್ಷಕವಾಗಿ ಈ ಗ್ಲೋಬಲ್ ಡಿವಿನಿಟಿ ಮಾಲ್ ನಿರ್ಮಾಣಗೊಂಡಿದೆ.

ಡಿಕೆಶಿ ಮಾಲೀಕತ್ವದ ಮಾಲ್‌: ಮಹಾನಗರದಲ್ಲಿ ಡಿ.ಕೆ. ಶಿವಕುಮಾರ್‌ ಮಾಲೀಕತ್ವದ ಇನ್ನೊಂದು ಮಾಲ್‌ ಇದಾಗಿದೆ. ಈ ಹಿಂದೆ ರಾಜಾಜಿನಗರ ಎಂಟ್ರನ್ಸ್‌ ಬಳಿ ಲೂಲು ಮಾಲ್‌ ಸಹ ಆರಂಭವಾಗಿದೆ. ಗ್ಲೋಬಲ್‌ ಮಾಲ್‌ ಸರಣಿಯ ಒಂದು ಬೃಹತ್‌ ಶಾಪಿಂಗ್‌ ತಾಣ ಇದಾಗಿದ್ದರೆ, ಈಗ ನಾಯಂಡಹಳ್ಳಿ ಬಳಿ ಇನ್ನೊಂದು ಮಾಲ್‌ ಉದ್ಘಾಟನೆಗೆ ಸಜ್ಜಾಗಿದೆ.

“ಗ್ಲೋಬಲ್ ಮಾಲ್ಸ್” ನಗರದ ಜನದಟ್ಟಣೆ ಪ್ರದೇಶದಿಂದ ಮತ್ತು ಬೆಂಗಳೂರು ಸಿಟಿ ರೈಲ್ವೇ ನಿಲ್ದಾಣ, ಮೆಜೆಸ್ಟಿಕ್ ಮತ್ತು ಮೈಸೂರು ವೃತ್ತದಂತಹ ಪ್ರಮುಖ ಜಂಕ್ಷನ್‌ಗಳಿಂದ ಸ್ವಲ್ಪ ದೂರದಲ್ಲಿಯೇ ತಲೆ ಎತ್ತುತ್ತಿದೆ. ಗ್ರಾಹಕ ಮತ್ತು ಗ್ರಾಹಕರ ಅನುಭವವನ್ನು ಹೆಚ್ಚಿಸುವ ಸಲುವಾಗಿ, ಗ್ಲೋಬಲ್ ಮಾಲ್ ವಿಶಾಲವಾದ ಒಳಾಂಗಣ ಪಾದಚಾರಿ ಮಾರ್ಗಗಳು, ಎಟಿಎಂಗಳು, ಹಣ ವಿನಿಮಯ ಕೇಂದ್ರಗಳು, ಪ್ರಯಾಣ ಮತ್ತು ರಜಾದಿನಗಳ ಬುಕಿಂಗ್ ಸೇವೆಗಳು, ಎಸ್ಕಲೇಟರ್‌ಗಳು, ಲಿಫ್ಟ್‌ಗಳು, ಮೋಟಾರ್ ಚಾಲಿತ ವೀಲ್ ಚೇರ್‌ಗಳಂತಹ ವಿಶೇಷ ಸೌಲಭ್ಯಗಳನ್ನು ಒಳಗೊಂಡಿರಲಿದೆ.

 

ವಾಹನ ನಿಲುಗಡೆ, ವಿಶಾಲ ಸ್ಥಳಾವಕಾಶ, ಆರಾಮದಾಯಕ ಓಡಾಟ, ಉತ್ತಮ ವಾತಾವರಣ, ಅಗತ್ಯ ಇರುವ ಎಲ್ಲಾ ವಸ್ತುಗಳು ಒಂದೇ ಕಡೆ ಸಿಗುವುದು, ಮನರಂಜನೆ ಜೊತೆ ವಿಹಾರಕ್ಕೆ ಹೇಳಿ ಮಾಡಿಸಿದ ತಾಣ ಮಾಲ್‌ಗಳು. ಈ ಮಾಲ್‌ಗಳ ಜನಪ್ರಿಯತೆ ಅರಿತ ಡಿ.ಕೆ. ಶಿವಕುಮಾರ್ ಅವಕಾಶ ಸಿಕ್ಕಲ್ಲೆಲ್ಲಾ ಮಾಲ್‌ ನಿರ್ಮಿಸುತ್ತಿದ್ದಾರೆ. ರಾಜಕಾರಣದ ಜೊತೆ ಉದ್ಯಮಿಯಾಗಿ ಅವರು ಬೆಳೆಯುತ್ತಿದ್ದಾರೆ.

ಬೆಂಗಳೂರು ನಗರದಲ್ಲಿ ಸಾಕಷ್ಟು ಮಾಲ್‌ಗಳು ತಲೆ ಎತ್ತುತ್ತಿದ್ದು, ಗ್ಲೋಬಲ್‌ ಮಾಲ್‌ ಸರಣಿ ಸಹ ಇದೀಗ ಆರಂಭವಾಗುತ್ತಿದೆ. ನಗರದ ವಿವಿಧೆಡೆ ಸ್ಥಳಾವಕಾಶವನ್ನು ಹುಡುಕಿ ಮಾಲ್‌ ಕಟ್ಟಡಗಳು ನಿರ್ಮಾಣವಾಗುತ್ತಿದೆ. ಜನರನ್ನು ಇತ್ತೀಚಿನ ದಿನಗಳಲ್ಲಿ ಮಾಲ್‌ಗಳು ಅಪಾರವಾಗಿ ಆಕರ್ಷಿಸುತ್ತಿವೆ. ಎಲ್ಲಾ ಸೇವೆ, ಸವಲತ್ತು, ಸೌಲಭ್ಯಗಳು ಒಂದೇ ಕಡೆ ಸಿಗುವ ಹಿನ್ನೆಲೆ ಜನ ಇಲ್ಲಿ ಹೆಚ್ಚು ಕಾಲ ಕಳೆಯಲು ಬಯಸುತ್ತಾರೆ.
ಮಾಹಿತಿ ತಾಣ, ಸಹಾಯ ಡೆಸ್ಕ್, ಪ್ರಥಮ ಚಿಕಿತ್ಸೆ ಮತ್ತು ಆಂಬ್ಯುಲೆನ್ಸ್ ಸೇವೆಗಳು, ಕಾರ್ ಕರೆ ಮತ್ತು ಕ್ಯಾಬ್ ಸೇವೆಗಳು, ವೈ-ಫೈ, ಬೇಬಿ ಕೇರ್ ರೂಂ, ತಳ್ಳುಗಾಡಿಗಳು, ಮಕ್ಕಳಿಗಾಗಿ ಸುರಕ್ಷತಾ ಟ್ಯಾಗ್‌ಗಳು, ಕಾರ್ ವಾಶ್ ಸೇವೆಗಳು, ಗರ್ಭಿಣಿಯರು ಮತ್ತು ಅಂಗವಿಕಲರಿಗೆ ಮೀಸಲು ಪಾರ್ಕಿಂಗ್ ಮತ್ತು ವಾಟರ್ ಕೂಲರ್ ಸೌಲಭ್ಯಗಳನ್ನು ಇದು ಹೊಂದಿದೆ.

​​