ವಾಷಿಂಗ್ಟನ್ ಡಿಸಿ (ಅಮೆರಿಕ): ಭಾರತದ ತಜ್ಞ ಉದ್ಯೋಗಿಗಳಿಗಾಗಿ ಅಮೆರಿಕವು ಸರಳ ವೀಸಾ ಯೋಜನೆ ರೂಪಿಸುತ್ತಿದೆ.
ಭಾರತೀಯರು ಅಮೆರಿಕ ಪ್ರವೇಶಿಸಲು ಅಥವಾ ಉಳಿಯಲು ಸಹಾಯ ಮಾಡುವ ಸಲುವಾಗಿ ಅಧ್ಯಕ್ಷ ಜೋ ಬೈಡನ್ ಆಡಳಿತವು ಭಾರತೀಯರಿಗಾಗಿ ಸುಲಭ ಪ್ರಕ್ರಿಯೆಗಳನ್ನು ಜಾರಿ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಅಮೆರಿಕ ಪ್ರವಾಸದ ನಡುವೆ ಈ ಬೆಳವಣಿಗೆ ನಡೆದಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸದ ನಡುವೆ ಭಾರತದ ನುರಿತ ಉದ್ಯೋಗಿಗಳಿಗಾಗಿ ಅಮೆರಿಕ ಸರಳ ವೀಸಾ ಯೋಜನೆ ರೂಪಿಸುತ್ತಿದೆ ಎಂದು ವರದಿಯಾಗಿದೆ.
ಹೆಚ್- 1ಬಿ ವೀಸಾದಲ್ಲಿರುವ ಕಡಿಮೆ ಸಂಖ್ಯೆಯ ಭಾರತೀಯರು ಮತ್ತು ಇತರ ವಿದೇಶಿ ಉದ್ಯೋಗಿಗಳು ಇತರ ರಾಷ್ಟ್ರಗಳಿಗೆ ಪ್ರಯಾಣಿಸುವ ಅಗತ್ಯವಿಲ್ಲದೇ ಅಮೆಕದಲ್ಲಿ ಆ ವೀಸಾಗಳನ್ನು ನವೀಕರಿಸಲು ಸಾಧ್ಯವಾಗುವಂತೆ ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಗುರುವಾರ ಪ್ರಕಟಿಸಬಹುದು ಎಂದು ತಿಳಿದುಬಂದಿದೆ.
ಇದೊಂದು ಪ್ರಾಯೋಗಿಕ ಕಾರ್ಯಕ್ರಮವಾಗಿದೆ. ಇಲ್ಲಿಯವರೆಗೆ ಹೆಚ್ಚಿನ ಹೆಚ್- 1ಬಿ ವೀಸಾ ಹೊಂದಿರುವವರು ಮತ್ತು ಅರ್ಜಿದಾರರು ಭಾರತೀಯರೇ ಆಗಿದ್ದಾರೆ. 2022ರ ಆರ್ಥಿಕ ವರ್ಷದಲ್ಲಿ ಸುಮಾರು 4.42 ಲಕ್ಷ ಹೆಚ್-1ಬಿ ವೀಸಾ ಹೊಂದಿದ ನೌಕರರ ಪೈಕಿ ಭಾರತೀಯ ನಾಗರಿಕರು ಶೇ.73ರಷ್ಟು ಇದ್ದಾರೆ. ಜನರ ಈ ಚಲನಶೀಲತೆ ಅಮೆರಿಕಕ್ಕೆ ದೊಡ್ಡ ಆಸ್ತಿ ಎಂದು ಪರಿಗಣಿಸಲಾಗಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಹೇಳಿದರು.
ಹೀಗಾಗಿ ಈ ಚಲನಶೀಲತೆಯನ್ನು ಬಹುಮುಖಿ ರೀತಿಯಲ್ಲಿ ಮತ್ತಷ್ಟು ಸಮೀಪಕ್ಕೆ ತರುವುದು ನಮ್ಮ ಗುರಿ. ಈ ನಿಟ್ಟಿನಲ್ಲಿ ಕೆಲವು ವಿಷಯಗಳಲ್ಲಿ ಬದಲಾವಣೆಗಳನ್ನು ಮಾಡಲು ಸೃಜನಾತ್ಮಕ ಮಾರ್ಗಗಳನ್ನು ಕಂಡುಕೊಳ್ಳಲು ಸ್ಟೇಟ್ ಡಿಪಾರ್ಟ್ಮೆಂಟ್ ಈಗಾಗಲೇ ತುಂಬಾ ಶ್ರಮಿಸುತ್ತಿದೆ ಎಂದೂ ಅಧಿಕಾರಿ ತಿಳಿಸಿದ್ದಾರೆ ಎಂಬುದಾಗಿ ವರದಿ ತಿಳಿಸಿದೆ.
ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರರು, ಅರ್ಹತೆ ಪಡೆಯುವ ವೀಸಾ ಪ್ರಕಾರಗಳು ಅಥವಾ ಪ್ರಾಯೋಗಿಕವಾಗಿ ಜಾರಿಯಾಗುವ ಈ ಯೋಜನೆ ದಿನ ಮತ್ತು ಸಮಯವನ್ನು ಬಹಿರಂಗಪಡಿಸಿಲ್ಲ. ಮುಂದಿನ ಒಂದು ಅಥವಾ ಎರಡು ವರ್ಷಗಳಲ್ಲಿ ಉಪಕ್ರಮವನ್ನು ವಿಸ್ತರಿಸುವ ಉದ್ದೇಶದಿಂದ ಪ್ರಾಯೋಗಿಕ ಕಾರ್ಯಕ್ರಮ ಸಣ್ಣ ಸಂಖ್ಯೆಯ ಪ್ರಕರಣಗಳೊಂದಿಗೆ ಪ್ರಾರಂಭಿಸಲಾಗುತ್ತದೆ ಎಂದು ವಕ್ತಾರರು ಹೇಳಿದ್ದಾರೆ.
ಪ್ರತಿ ವರ್ಷ ಅಮೆರಿಕ ಸರ್ಕಾರವು ನುರಿತ ವಿದೇಶಿ ಉದ್ಯೋಗಿಗಳನ್ನು ಹೊಂದಲು ಉದ್ದೇಶಿಸಿರುವ ಕಂಪನಿಗಳಿಗೆ 65 ಸಾವಿರ ಹೆಚ್- 1ಬಿ ವೀಸಾಗಳು ಲಭ್ಯವಾಗುವಂತೆ ನೋಡಿಕೊಳ್ಳುತ್ತಿದೆ. ಉನ್ನತ ಪದವಿಗಳನ್ನು ಹೊಂದಿರುವ ಉದ್ಯೋಗಿಗಳಿಗೆ ಹೆಚ್ಚುವರಿ 20 ಸಾವಿರ ವೀಸಾಗಳನ್ನು ನೀಡುತ್ತದೆ. ಉದ್ಯೋಗಿಗಳ ವೀಸಾ ಮೂರು ವರ್ಷಗಳವರೆಗೆ ಮಾನ್ಯವಾಗಿರುತ್ತದೆ. ನಂತರ ಇನ್ನೂ ಮೂರು ವರ್ಷಗಳವರೆಗೆ ನವೀಕರಿಸಬಹುದು.
ಪ್ರಾಯೋಗಿಕ ಯೋಜನೆಯು ಎಲ್- 1 ವೀಸಾ ಎಂದರೆ ತಾತ್ಕಾಲಿಕ ವಿದೇಶಿ ಉದ್ಯೋಗಿ ವೀಸಾಗಳನ್ನು ಒಳಗೊಂಡಿರುತ್ತದೆ. ಇದರಿಂದ ಕೆಲವು ತಾತ್ಕಾಲಿಕ ವಿದೇಶಿ ಉದ್ಯೋಗಿಗಳಿಗೆ ಅಮೆರಿಕದ ತಮ್ಮ ವೀಸಾಗಳನ್ನು ನವೀಕರಿಸಲು ಅನುಮತಿಸುವ ನಿರ್ಧಾರವು ಇತರ ರಾಷ್ಟ್ರಗಳಲ್ಲಿನ ಕಾನ್ಸುಲೇಟ್ಗಳಲ್ಲಿ ವೀಸಾ ಸಂದರ್ಶನಗಳ ಅಗತ್ಯ ಇರುವುದಿಲ್ಲ ಎಂದು ವರದಿಯಾಗಿದೆ.