ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಾಹಕರಿಗೆ ಚುನಾವಣಾ ಪೂರ್ವ ತಯಾರಿ ತರಬೇತಿ

ಉಡುಪಿ: ಸಹಕಾರಿ ಸಂಘಗಳ ಚುನಾವಣೆ ಪ್ರಕ್ರಿಯೆಯಲ್ಲಿ ಮುಖ್ಯ ಕಾರ್ಯನಿರ್ವಾಹಕರ ಪಾತ್ರ ಬಹಳಷ್ಟು ಮುಖ್ಯವಾಗಿರುತ್ತದೆ. ಚುನಾವಣೆಯನ್ನು ಯಾವುದೇ ರಾಜಕೀಯ ಪ್ರವೇಶ ಇಲ್ಲದೆ ಪಾರದರ್ಶಕತೆಯಿಂದ ಮಾಡುವ ಜವಾಬ್ದಾರಿ ಮುಖ್ಯಕಾರ್ಯನಿರ್ವಾಹಕರ ಮೇಲಿದೆ ಎಂದು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.

ಕರ್ನಾಟಕ ರಾಜ್ಯ ಸಹಕಾರ ಮಾಹಾಮಂಡಳ ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆ ಉಡುಪಿ ಜಿಲ್ಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲೆಯಲ್ಲಿ ಚುನಾವಣೆ ನಡೆಯಲಿರುವ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಾಹಕರಿಗೆ ಚುನಾವಣಾ ಪೂರ್ವ ತಯಾರಿ ಕುರಿತು ಬುಧವಾರ ಬಡಗಬೆಟ್ಟು ಸೊಸೈಟಿಯ ಜಗನ್ನಾಥ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ತರಬೇತಿ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯಶಸ್ವಿನಿ ಯೋಜನೆಯಲ್ಲಿ ಈ ಬಾರಿ ಮಣಿಪಾಲ ಕೆಎಂಸಿ ಸೇರಿದಂತೆ ಉಡುಪಿಯ ಪ್ರಮುಖ ಆಸ್ಪತ್ರೆಗಳನ್ನು ಕೈಬಿಡಲಾಗಿದೆ. ಈ ಆಸ್ಪತ್ರೆಯಲ್ಲಿ ಯಶಸ್ವಿನಿ ಯೋಜನೆ ಇಲ್ಲದಿರುವುದರಿಂದ ಸದಸ್ಯರು ಮುಖ್ಯಕಾರ್ಯನಿರ್ವಾ ಹಕರನ್ನು ಪ್ರಶ್ನಿಸುವಂತಾಗಿದೆ. ಈ ಬಗ್ಗೆ ಆರೋಗ್ಯ ಸಚಿವರ ಗಮನಕ್ಕೆ ತಂದಿದ್ದು, ಅವರು ಮುಖ್ಯಮಂತ್ರಿ ಜೊತೆ ಚರ್ಚಿಸಿ ಕ್ರಮ ತೆಗೆದುಕೊಳ್ಳುವ ವಿಶ್ವಾಸ ಇದೆ ಎಂದು ಅವರು ತಿಳಿಸಿದರು.

ಶಿಬಿರವನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ರಮೇಶ್ ಎಚ್.ಎನ್. ಮಾತನಾಡಿ, ಜಿಲ್ಲೆಯ 700 ಸಹಕಾರಿ ಸಂಘಗಳ ಪೈಕಿ 2023ನೆ ಸಾಲಿನಲ್ಲಿ 140 ಸಂಘಗಳ ಆಡಳಿತ ಮಂಡಳಿಗೆ ಚುನಾವಣೆ ನಡೆಸಲಾಗುತ್ತಿದೆ. ಮತದಾರರ ಪಟ್ಟಿ ಸೇರಿದಂತೆ ಇತರ ಪೂರ್ವ ಸಿದ್ಧತೆಗಳನ್ನು ಕಾರ್ಯನಿರ್ವಾಹಕ ಅಧಿಕಾರಿಗಳು ಮಾಡಬೇಕಾಗಿದೆ. ಈ ಮೂಲಕ ಚುನಾವಣೆಯಲ್ಲಿ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುವುದು ಅತೀ ಅಗತ್ಯವಾಗಿದೆ ಎಂದರು.

ವೇದಿಕೆಯಲ್ಲಿ ಯೂನಿಯನ್ ಆಡಳಿತ ಮಂಡಳಿ ಸದಸ್ಯರಾದ ಮನೋಜ್ ಎಸ್.ಕರ್ಕೇರ, ಕೆ.ಕೊರಗ ಪೂಜಾರಿ ಉಪಸ್ಥಿತರಿದ್ದರು. ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ ಪ್ರದಸ ರೋಹಿತ್ ಕೆ.ಆರ್. ‘ಸಹಕಾರ ಸಂಘಗಳ ಚುನಾವಣೆಗೆ ನಡೆಸಬೇಕಾದ ಪೂರ್ವ ತಯಾರಿ’ ಮತ್ತು ಮೂಡಬಿದ್ರೆ ಶ್ರೀ ದವಳಾ ಕಾಲೇಜಿನ ಉಪನ್ಯಾಸಕ ಸಂತೋಷ್ ಶೆಟ್ಟಿ, ‘ಸಹಕಾರ ಸಂಘಗಳ ಕಾರ್ಯ ವೈಖರಿಯಲ್ಲಿ ಬದಲಾಗುತ್ತಿರುವ ದೃಷ್ಟಿಕೋನಗಳು’ ಕುರಿತು ಉಪನ್ಯಾಸ ನೀಡಿದರು.

ಯೂನಿಯನ್ ವ್ಯವಸ್ಥಾಪಕ ವಿಶ್ವನಾಥ್ ಅಮೀನ್ ಸ್ವಾಗತಿಸಿ ವಂದಿಸಿದರು.