ಪಾಟ್ನಾ(ಬಿಹಾರ): ವಿಶ್ವದ ಅತಿದೊಡ್ಡ ಹಿಂದೂ ದೇವಾಲಯವಾಗಲಿರುವ ವಿರಾಟ್ ರಾಮಾಯಣ ದೇವಾಲಯವು ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಕೈತ್ವಾಲಿಯಾದಲ್ಲಿ ನಿರ್ಮಾಣವಾಗಲಿದೆ.
ಮಹಾವೀರ ಮಂದಿರ ನ್ಯಾಸ್ನ ಮಹತ್ವಾಕಾಂಕ್ಷೆಯ ಯೋಜನೆಯ ವಿರಾಟ್ ರಾಮಾಯಣ ದೇವಾಲಯದ ನಿರ್ಮಾಣ ಕಾರ್ಯವು ಜೂನ್ 20 ಮಂಗಳವಾರದಿಂದ ಅಂದರೆ ಇಂದಿನಿಂದ ಪ್ರಾರಂಭವಾಗುತ್ತಿದೆ.
ದೊಡ್ಡ ಹೈಡ್ರಾಲಿಕ್ ಮತ್ತು ಇತರ ಯಂತ್ರಗಳು ಕೇಸರಿಯಾ – ಚಾಕಿಯಾ ರಸ್ತೆಯ ಕಥ್ವಾಲಿಯಾ-ಬಹುರಾದ ಜಾಂಕಿ ನಗರವನ್ನು ಈಗಾಗಲೇ ತಲುಪಿದೆ. ಇಂದು ಬೆಳಗ್ಗೆ 11.50 ಕ್ಕೆ ವಿಜಯ್ ಮುಹೂರ್ತದಲ್ಲಿ ಕೆಲಸ ಆರಂಭವಾಗಲಿದೆ. ಮೊದಲು ದೇವಸ್ಥಾನದ ಒಟ್ಟು 3102 ಅಂಡರ್ಗ್ರೌಂಡ್ ಕಂಬಗಳಲ್ಲಿ ಮೊದಲ ಕಂಬದ ಅಡಿಪಾಯ ಹಾಕಲಾಗುತ್ತದೆ. ಇನ್ನು ಈ ವರ್ಷದ ನವೆಂಬರ್ ವೇಳೆಗೆ ಶಂಕುಸ್ಥಾಪನೆ ಕಾಮಗಾರಿ ಪೂರ್ಣಗೊಳಿಸಲು ಗುರಿ ನಿಗದಿಪಡಿಸಲಾಗಿದೆ.
2025ರ ಮಹಾಶಿವರಾತ್ರಿ ವೇಳೆಗೆ ಜಗತ್ತಿನ ಅತಿ ದೊಡ್ಡ ಶಿವಲಿಂಗವನ್ನು ಮಂದಿರದಲ್ಲಿ ಸ್ಥಾಪಿಸಲಾಗುವುದು. 2025ರ ವರ್ಷದ ಅಂತ್ಯದ ವೇಳೆಗೆ ವಿರಾಟ್ ರಾಮಾಯಣ ಮಂದಿರ ಸಿದ್ಧವಾಗಲಿದೆ. ದೇವಾಲಯದ ಒಟ್ಟು 12 ಶಿಖರಗಳನ್ನು ಅಲಂಕರಿಸಲು ಇನ್ನೂ ಎರಡು ವರ್ಷಗಳು ಬೇಕಾಗುತ್ತದೆ.
ವಿರಾಟ್ ರಾಮಾಯಣ ದೇವಾಲಯವು ಮೂರು ಅಂತಸ್ತಿನದ್ದಾಗಿದ್ದು, ದೇವಾಲಯವನ್ನು ಪ್ರವೇಶಿಸಿದಾಗ, ಮೊದಲು ವಿಘ್ನ ನಿವಾರಕ ಗಣೇಶನ ದರ್ಶನವಾಗಲಿದೆ.
ಅಲ್ಲಿಂದ ಮುಂದೆ ಸಾಗುತ್ತಿದ್ದಂತೆ ಕಪ್ಪು ಗ್ರಾನೈಟ್ ಬಂಡೆಯಿಂದ ಮಾಡಿದ ಬೃಹತ್ ಶಿವಲಿಂಗ ಕಾಣಿಸುತ್ತದೆ ಎಂದು ಮಹಾವೀರ ಮಂದಿರ ಟ್ರಸ್ಟ್ನ ಕಾರ್ಯದರ್ಶಿ ಆಚಾರ್ಯ ಕಿಶೋರ್ ಕುನಾಲ್ ತಿಳಿಸಿದ್ದಾರೆ.
200 ಟನ್ ತೂಕದ ಶಿವಲಿಂಗ: ಚೆನ್ನೈ ಬಳಿಯ ಮಹಾಬಲಿಪುರಂನಲ್ಲಿ ಮುಖ್ಯ ಶಿವಲಿಂಗದೊಂದಿಗೆ 250 ಟನ್ ತೂಕದ ಕಪ್ಪು ಗ್ರಾನೈಟ್ ಕಲ್ಲಿನ ಬಂಡೆಯನ್ನು ಕೆತ್ತಿ ಸಹಸ್ರಲಿಂಗವನ್ನು ಸಹ ಮಾಡಲಾಗುತ್ತಿದೆ. 8ನೇ ಶತಮಾನದ ನಂತರ ಭಾರತದಲ್ಲಿ ಸಹಸ್ರಲಿಂಗವನ್ನು ನಿರ್ಮಿಸಲಾಗಿಲ್ಲ. ಒಟ್ಟು ಶಿವಲಿಂಗದ ತೂಕ 200 ಟನ್, ಎತ್ತರ 33 ಅಡಿ ಇರಲಿದೆ.
270 ಅಡಿ ಎತ್ತರದ ಶಿಖರ: ದೇವಾಲಯದ ವಿಸ್ತೀರ್ಣ 3.67 ಲಕ್ಷ ಚದರ ಅಡಿ ಇರಲಿದೆ ಎಂದು ಕಿಶೋರ್ ಕುನಾಲ್ ತಿಳಿಸಿದ್ದು, ದೇವಾಲಯವು ಒಟ್ಟು 270 ಅಡಿಗಳ ಶಿಖರ, 198 ಅಡಿಗಳ ಶಿಖರ, 180 ಅಡಿಗಳ ನಾಲ್ಕು ಶಿಖರಗಳು ಹೊಂದಿರಲಿದೆ.
135 ಅಡಿಯ ಒಂದು ಶಿಖರ ಮತ್ತು 108 ಅಡಿ ಎತ್ತರದ 5 ಗೋಪುರಗಳಿರುತ್ತವೆ. ವಿರಾಟ್ ರಾಮಾಯಣ ದೇವಾಲಯದ ಉದ್ದ 1080 ಅಡಿ ಮತ್ತು ಅಗಲ 540 ಅಡಿ. ವಿರಾಟ್ ರಾಮಾಯಣ ದೇವಾಲಯದಲ್ಲಿ ಶೈವ ಮತ್ತು ವೈಷ್ಣವ ದೇವತೆಗಳ ಒಟ್ಟು 22 ದೇವಾಲಯಗಳು ಇರುತ್ತವೆ.
ದೇವಸ್ಥಾನ ನಿರ್ಮಾಣಕ್ಕೆ 120 ಎಕರೆ ಭೂಮಿ ಲಭ್ಯವಿದೆ.
ಕಾಂಬೋಡಿಯಾದ ಆಕ್ಷೇಪದಿಂದ ವಿಳಂಬ: ವಿರಾಟ್ ರಾಮಾಯಣ ದೇವಾಲಯವು ಅಯೋಧ್ಯೆಯಿಂದ ಜನಕಪುರದವರೆಗೆ ನಿರ್ಮಿಸಲಾಗುತ್ತಿರುವ ರಾಮ ಜಾನಕಿ ಮಾರ್ಗದಲ್ಲಿದೆ. ಕಾಂಬೋಡಿಯನ್ ಸರ್ಕಾರದ ಆಕ್ಷೇಪಣೆಯಿಂದಾಗಿ ಐದು ವರ್ಷಗಳ ವಿಳಂಬಕ್ಕೆ ಕಾರಣವಾಯಿತು. ವಿರಾಟ್ ರಾಮಾಯಣ ದೇವಸ್ಥಾನದ ಭೂಮಿಪೂಜೆಯನ್ನು 2012 ರಲ್ಲಿ ಮಾಡಲಾಯಿತು. ಆದರೆ, ಕಾಂಬೋಡಿಯಾದ ಆಕ್ಷೇಪ ಹಾಗೂ ಜಮೀನು ಖರೀದಿಯಲ್ಲಿ ವಿಳಂಬ ಧೋರಣೆಯಿಂದ ಕಾಮಗಾರಿ ಆರಂಭಿಸಲಾಗಲಿಲ್ಲ.
5 ವರ್ಷಗಳ ವಿವಿಧ ಪತ್ರವ್ಯವಹಾರ ಮತ್ತು ಪ್ರಯತ್ನಗಳ ನಂತರ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ವರದಿಯ ನಂತರ ಈ ಸಮಸ್ಯೆಯನ್ನು ಪರಿಹರಿಸಲಾಗಿದೆ, ಇದರಲ್ಲಿ ವಿರಾಟ್ ರಾಮಾಯಣ ದೇವಾಲಯವು ಅಂಕೋರ್ ವಾಟ್ ದೇವಾಲಯಕ್ಕಿಂತ ಭಿನ್ನವಾಗಿದೆ ಎಂದು ವಿವರಿಸಲಾಗಿದೆ.
ವಿರಾಟ್ ರಾಮಾಯಣ ಮಂದಿರ ನಿರ್ಮಾಣಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕೂಡ ನಿರಾಕ್ಷೇಪಣೆ ಸಲ್ಲಿಸಿದೆ. ವಿರಾಟ್ ರಾಮಾಯಣ ದೇವಾಲಯವು ಪಾಟ್ನಾದಿಂದ 120 ಕಿಮೀ ದೂರದಲ್ಲಿ ಮತ್ತು ಪ್ರಸ್ತುತ ಕೇಸರಿಯಾ-ಚಾಕಿಯಾ ರಸ್ತೆಯಲ್ಲಿ ವೈಶಾಲಿಯಿಂದ 60 ಕಿಮೀ ದೂರದಲ್ಲಿದೆ. ಈ ದೇವಾಲಯವು ನಾಲ್ಕು ಗ್ರಾಮಗಳು ಮತ್ತು ಮೂರು ಪಂಚಾಯತ್ಗಳ ವ್ಯಾಪ್ತಿಯಲ್ಲಿ ಬರುತ್ತದೆ.
ಕಾಮಗಾರಿ ಆಧಾರದ ಮೇಲೆ ಪಾವತಿ: ವಿರಾಟ್ ರಾಮಾಯಣ ದೇವಸ್ಥಾನದ ಶಂಕುಸ್ಥಾಪನೆ ಕಾಮಗಾರಿ ಆರಂಭದ ಸಂದರ್ಭದಲ್ಲಿ ಶಂಕುಸ್ಥಾಪನ ಸಂಸ್ಥೆ ಸನ್ ಟೆಕ್ ಇನ್ ಫ್ರಾ ವ್ಯವಸ್ಥಾಪಕ ನಿರ್ದೇಶಕ ಗೌರವ್ ಗುಪ್ತಾ ಉಪಸ್ಥಿತರಿರುವರು. ವಿರಾಟ್ ರಾಮಾಯಣ ದೇವಸ್ಥಾನದಲ್ಲಿ ಶಂಕುಸ್ಥಾಪನೆ ಕಾರ್ಯದಲ್ಲಿ 1050 ಟನ್ ಸ್ಟೀಲ್ ಮತ್ತು 15 ಸಾವಿರ ಕ್ಯೂಬಿಕ್ ಮೀಟರ್ ಕಾಂಕ್ರೀಟ್ ಅನ್ನು ಬಳಸಲಾಗುವುದು ಎಂದು ನಿರ್ಮಾಣ ಸಂಸ್ಥೆ ಅಧಿಕಾರಿ ಶ್ರವಣ್ ಕುಮಾರ್ ಝಾ ತಿಳಿಸಿದ್ದಾರೆ.
ಮಹಾವೀರ ಮಂದಿರ ನಿರ್ಮಾಣಕ್ಕೆ ಬೇಕಾದ ಸಾಮಗ್ರಿಗಳನ್ನು ಸಂಸ್ಥೆ ಒದಗಿಸಲಿದೆ. ಮುಂಗಡ ಪಾವತಿ ಇಲ್ಲದೇ ಏಜೆನ್ಸಿ ಕಾರ್ಯನಿರ್ವಹಿಸಲಿದೆ, ಕೆಲಸದ ಆಧಾರದ ಮೇಲೆ ಪಾವತಿ ಮಾಡಲಾಗುವುದು ಎಂದು ಆಚಾರ್ಯ ಕಿಶೋರ್ ಕುನಾಲ್ ತಿಳಿಸಿದ್ದಾರೆ.
ವಿರಾಟ್ ರಾಮಾಯಣದ ಹೆಸರನ್ನು ಮೊದಲು ವಿರಾಟ್ ಅಂಕೋರ್ವಾಟ್ ದೇವಾಲಯ ಎಂದು ಕರೆಯಲಾಗುತ್ತಿತ್ತು. ಕಾಂಬೋಡಿಯಾದ ಅಂಕೋರ್ ವಾಟ್ ದೇವಾಲಯದಲ್ಲಿ ಈ ಹೆಸರು ಕಂಡುಬಂದ ಕಾರಣ ಕಾಂಬೋಡಿಯನ್ ಸರ್ಕಾರವು 2012 ರಲ್ಲಿ ತನ್ನ ಆಕ್ಷೇಪಣೆಯನ್ನು ದಾಖಲಿಸಿತು.
ಕಾಂಬೋಡಿಯಾದ ಆಕ್ಷೇಪದ ನಂತರ, ದೇವಾಲಯದ ಹೆಸರನ್ನು ವಿರಾಟ್ ರಾಮಾಯಣ ದೇವಾಲಯ ಎಂದು ಬದಲಾಯಿಸಲಾಯಿತು.