ಉಡುಪಿ: ಕಾಂಗ್ರೆಸ್ ಪಕ್ಷದ ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿ ಅಕ್ಕಿ ನೀಡುವ ನಿರ್ಧಾರದಿಂದ ಹಿಂದೆ ಸರಿದು ಬಡವರ ಅನ್ನ ಕಿತ್ತುಕೊಳ್ಳಲು ಹೊರಟಿರುವ ಕೇಂದ್ರ ಬಿಜೆಪಿ ಸರಕಾರದ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಉಡುಪಿ ಬ್ರಹ್ಮಗಿರಿ ಸರ್ಕಲ್ ನಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ನೂರಾರು ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಭವನದಿಂದ ಮೆರವಣಿಗೆಯಲ್ಲಿ ಹೊರಟು ಬ್ರಹ್ಮಗಿರಿ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿದರು. ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಕೇಂದ್ರ ಸರಕಾರವು ಅಕ್ಕಿ ಕೊಡಲು ನಿರಾಕರಿಸುವ ಮೂಲಕ ಬಡವರ ಹೊಟ್ಟೆಗೆ ಹೊಡೆಯುವ ಕೆಲಸ ಮಾಡಿದೆ. ಕೇಂದ್ರ ಸರಕಾರ ತಾಲಿಬಾನ್ ಗೆ 20 ಸಾವಿರ ಟನ್ ಅಕ್ಕಿ ವಿತರಣೆ ಮಾಡಿದೆ. ಇವರಿಗೆ ತಾಲಿಬಾನ್ ಗೆ ನೀಡಲು ಅಕ್ಕಿ ಇದೆ. ಆದರೆ, ಕರ್ನಾಟಕ ರಾಜ್ಯದ ಬಡವರಿಗೆ ಅಕ್ಕಿ ಕೊಡುವುದಕ್ಕೆ ತಡೆ ನೀಡುತ್ತಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುಖಂಡರಾದ ಮುನಿಯಾಲು ಉದಯಕುಮಾರ್ ಶೆಟ್ಟಿ, ರಮೇಶ್ ಕಾಂಚನ್, ಕೃಷ್ಣಮೂರ್ತಿ ಆಚಾರ್ಯ, ದಿನೇಶ್ ಹೆಗ್ಡೆ ಮೊಳಹಳ್ಳಿ, ಹರೀಶ್ ಕಿಣಿ, ಪ್ರಸಾದ್ ರಾಜ್ ಕಾಂಚನ್ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.












