ಸುಡಾನ್​ನಲ್ಲಿ ಬಿಕ್ಕಟ್ಟು ಮತ್ತಷ್ಟು ಉಲ್ಬಣ

ವಿಶ್ವಸಂಸ್ಥೆ: ಸುಡಾನ್‌ನಲ್ಲಿ ಹಿಂಸಾತ್ಮಕ ಸಂಘರ್ಷ ಮೂರನೇ ತಿಂಗಳಿಗೆ ಕಾಲಿಟ್ಟಿದ್ದು ದೇಶಾದ್ಯಂತ ಮಾನವೀಯ ಪರಿಸ್ಥಿತಿ ಹದಗೆಡುತ್ತಲೇ ಇದೆ ಎಂದು ವಿಶ್ವಸಂಸ್ಥೆಯ ಪರಿಹಾರ ವಿಭಾಗದ ಮುಖ್ಯಸ್ಥ ಮಾರ್ಟಿನ್ ಗ್ರಿಫಿತ್ಸ್ ಹೇಳಿದ್ದಾರೆ. ಸಂಘರ್ಷದಿಂದ ಜರ್ಜರಿತವಾಗಿರುವ ಸುಡಾನ್​ನಲ್ಲಿ ಮಾನವೀಯ ಬಿಕ್ಕಟ್ಟು ತೀರಾ ಉಲ್ಬಣಗೊಂಡಿದೆ. ಅಗತ್ಯ ವಸ್ತುಗಳಿಗೆ ಜನ ಪರದಾಡುವಂತಾಗಿದೆ.

ಮಾನವೀಯ ವ್ಯವಹಾರಗಳ ಯುಎನ್ ಅಂಡರ್‌ಸೆಕ್ರೆಟರಿ ಜನರಲ್ ಮತ್ತು ತುರ್ತು ಪರಿಹಾರ ಸಂಯೋಜಕರಾಗಿರುವ ಗ್ರಿಫಿತ್ಸ್, ಸುಡಾನ್‌ನ ಡಾರ್ಫರ್‌ನಲ್ಲಿ ಪರಿಸ್ಥಿತಿಯು ಮಾನವೀಯ ವಿಪತ್ತಿನತ್ತ ತಿರುಗುತ್ತಿದೆ ಎಂದು ಎಚ್ಚರಿಸಿದ್ದಾರೆ.

ಸುಮಾರು 1.7 ಮಿಲಿಯನ್ ಜನರು ಈಗ ದೇಶದಲ್ಲಿ ಆಂತರಿಕವಾಗಿ ಸ್ಥಳಾಂತರಗೊಂಡಿದ್ದಾರೆ ಮತ್ತು ಸುಮಾರು ಅರ್ಧ ಮಿಲಿಯನ್ ಜನರು ಸುಡಾನ್ ಹೊರಗೆ ಆಶ್ರಯ ಪಡೆದಿದ್ದಾರೆ ಎಂದು ಅವರು ಹೇಳಿದರು. ವೈದ್ಯಕೀಯ ಮತ್ತು ಮಾನವೀಯ ಆಸ್ತಿಗಳ ಲೂಟಿ ಬೃಹತ್ ಪ್ರಮಾಣದಲ್ಲಿ ಮುಂದುವರಿದಿದೆ ಮತ್ತು ಲಿಂಗ ಆಧಾರಿತ ಹಿಂಸಾಚಾರದ ವರದಿಗಳಲ್ಲಿ ಕೂಡ ಏರಿಕೆ ಕಂಡುಬಂದಿದೆ. ರೈತರು ತಮ್ಮ ಭೂಮಿಗಳ ಕಡೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಇದು ಆಹಾರ ಅಭದ್ರತೆಯ ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಅಧಿಕಾರಿಯು ತಿಳಿಸಿದರು.

ಏಪ್ರಿಲ್ 15 ರಂದು ಸುಡಾನ್ ಸೇನೆ ಮತ್ತು ಅರೆಸೇನಾ ಕ್ಷಿಪ್ರ ಬೆಂಬಲ ಪಡೆಗಳ ನಡುವೆ ಘರ್ಷಣೆಗಳು ಪ್ರಾರಂಭವಾದಾಗಿನಿಂದ ಕನಿಷ್ಠ 958 ಜನರು ಸಾವನ್ನಪ್ಪಿದ್ದಾರೆ ಮತ್ತು 4,746 ಇತರರು ಗಾಯಗೊಂಡಿದ್ದಾರೆ ಎಂದು ಸುಡಾನ್ ವೈದ್ಯರ ಒಕ್ಕೂಟ ಇತ್ತೀಚೆಗೆ ತಿಳಿಸಿದೆ.
ಡಾರ್ಫರ್‌ನಲ್ಲಿ ಜನರು ಅತ್ಯಂತ ಕೆಟ್ಟ ಪರಿಸ್ಥಿತಿಗಳಲ್ಲಿ ಸಿಲುಕಿರುವ ಬಗ್ಗೆ ನಾನು ವಿಶೇಷವಾಗಿ ಚಿಂತಿತನಾಗಿದ್ದೇನೆ. ಭೀಕರ ಮಾನವೀಯ ಸನ್ನಿವೇಶಗಳ ಜೊತೆಗೆ, 20 ವರ್ಷಗಳ ಹಿಂದೆ ಮಾರಣಾಂತಿಕ ಸಂಘರ್ಷವನ್ನು ಪ್ರಚೋದಿಸಿದ ಜನಾಂಗೀಯ ಉದ್ವಿಗ್ನತೆಯು ಮರುಕಳಿಸುವ ಸಾಧ್ಯತೆ ಇದ್ದು, ಸದ್ಯ ಡಾರ್ಫರ್‌ನಲ್ಲಿ ಅಂತರ್ ಕೋಮು ಹಿಂಸಾಚಾರ ಹರಡುತ್ತಿದೆ ಎಂದು ಅವರು ಹೇಳಿದರು. ಡಾರ್ಫರ್​ನಲ್ಲಿ ಮಾನವೀಯ ವಿಪತ್ತು ವಿಪರೀತವಾಗುತ್ತಿದೆ. ಮತ್ತೊಮ್ಮೆ ಇಂಥದೊಂದು ವಿಪತ್ತು ಸಂಭವಿಸಲು ಜಗತ್ತು ಬಿಡಬಾರದು ಎಂದು ಗ್ರಿಫಿತ್ಸ್ ಹೇಳಿದರು.

2019 ರಲ್ಲಿ ಒಮರ್ ಅಲ್-ಬಶೀರ್ ಅವರನ್ನು ಪದಚ್ಯುತಗೊಳಿಸಿದ ನಂತರ ಖಾರ್ಟೂಮ್‌ನಲ್ಲಿ ಸೇನೆ ಮತ್ತು ಅರೆಸೇನಾ ಕ್ಷಿಪ್ರ ಬೆಂಬಲ ಪಡೆಗಳ (ಆರ್‌ಎಸ್‌ಎಫ್) ನಡುವೆ ಭುಗಿಲೆದ್ದ ಹೋರಾಟವು ನಾಗರಿಕ ಆಡಳಿತಕ್ಕೆ ಅಂತರರಾಷ್ಟ್ರೀಯ ಬೆಂಬಲಿತ ಯೋಜನೆಯನ್ನು ಹಳಿತಪ್ಪಿಸಿದೆ. ಈ ಸಂಘರ್ಷವು ಸುಡಾನ್‌ನ ಆಡಳಿತ ಮಂಡಳಿಯ ಮುಖ್ಯಸ್ಥ ಮತ್ತು ಅದರ ಸೈನ್ಯದ ಕಮಾಂಡರ್ ಜನರಲ್ ಅಬ್ದೆಲ್ ಫತ್ತಾಹ್ ಅಲ್-ಬುರ್ಹಾನ್ ಮತ್ತು ಶ್ರೀಮಂತ, ಒಂದು ಕಾಲದ ಮಿಲಿಷಿಯಾ ನಾಯಕ ಜನರಲ್ ಮೊಹಮ್ಮದ್ ಹಮ್ದಾನ್ ದಗಾಲೊ ಮಧ್ಯೆ ನಡೆದಿದೆ.

ವಿದೇಶಿ ನೆರವಿನ ಮೇಲೆ ಹೆಚ್ಚು ಅವಲಂಬಿತವಾಗಿರುವ ಸುಡಾನ್​ನಲ್ಲಿ ಸಂಘರ್ಷ ನಡೆಯುವುದು ಹೊಸದೇನಲ್ಲ. ಆದರೆ ಈ ಬಾರಿ, ಹೋರಾಟವು ರಾಷ್ಟ್ರದ ದೂರದ ಪ್ರದೇಶದ ಬದಲಿಗೆ ರಾಜಧಾನಿಯಲ್ಲೇ ನಡೆಯುತ್ತಿದೆ. ಸುಡಾನ್‌ನ ಏಳು ನೆರೆಹೊರೆಯ ದೇಶಗಳ ಪೈಕಿ ಇಥಿಯೋಪಿಯಾ, ಚಾಡ್, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಲಿಬಿಯಾ ಮತ್ತು ದಕ್ಷಿಣ ಸುಡಾನ್ ಈ ಐದು ದೇಶಗಳು ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಕ್ರಾಂತಿ ಅಥವಾ ಸಂಘರ್ಷವನ್ನು ಎದುರಿಸಿವೆ.