ಮಂಗಳೂರು: ಬಿಪರ್‌ಜೋಯ್ ಚಂಡಮಾರುತ ಅಪ್ಪಳಿಸುವ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಮತ್ತು INCOIS ವತಿಯಿಂದ ಕರ್ನಾಟಕದ ಕರಾವಳಿ ಭಾಗದಲ್ಲಿ ‘ಹೈ ವೇವ್ ಅಲರ್ಟ್’ ಘೋಷಣೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.ಬಿಪರ್ ಜಾಯ್ ಚಂಡಮಾರುತ ಅಪ್ಪಳಿಸುವ ಬೆನ್ನಲ್ಲೇ ಕರ್ನಾಟಕದ ಕರಾವಳಿ ಭಾಗದಲ್ಲಿ ‘ಹೈ ವೇವ್ ಅಲರ್ಟ್’ ಘೋಷಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ 42 ಕಿಲೋ ಮೀಟರ್ನಷ್ಟು ಉದ್ದದ ಕರಾವಳಿ ತೀರ ಹೊಂದಿದ್ದು, ಇತ್ತೀಚಿಗೆ ಅರಬ್ಬಿ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಪಶ್ಚಿಮ ಕರಾವಳಿಗೆ ‘ಬಿಪರ್ ಜಾಯ್’ ಚಂಡಮಾರುತವು ಅಪ್ಪಳಿಸುವ ಸಾಧ್ಯತೆ ಇದೆ. ಈ ಚಂಡಮಾರುತದ ತೀವ್ರತೆಯ ಪರಿಣಾಮದಿಂದ ಸಮುದ್ರದ ಅಲೆಗಳ ಎತ್ತರ 3 ರಿಂದ 4 ಮೀಟರ್ ನಷ್ಟು ಇರಲಿದೆ.
ಕರಾವಳಿಯಲ್ಲಿ ಉಂಟಾಗಿರುವ ಪ್ರಕ್ಷುಬ್ಧ ವಾತಾವರಣದಿಂದಾಗಿ ಮುಂದಿನ 5 ದಿನಗಳವರೆಗೆ ಅಂದರೆ, ಜೂ.19ರ ವರೆಗೆ ಕರಾವಳಿ ತೀರದಲ್ಲಿ ಸಾರ್ವಜನಿಕರು, ಪ್ರವಾಸಿಗರು, ಮಕ್ಕಳು, ಸ್ಥಳೀಯರು, ಮೀನುಗಾರರು ಸಮುದ್ರಕ್ಕೆ ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ. ಸಮುದ್ರದ ಹತ್ತಿರ ಓಡಾಡುವುದು ಹಾಗೂ ಆಟವಾಡುವುದನ್ನು ಕೂಡಾ ನಿಷೇಧಿಸಲಾಗಿದೆ.
ಪ್ರಾಕೃತಿಕ ವಿಕೋಪ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ ತುರ್ತು ಸೆವೆಗೆ 24/7 ಕಂಟ್ರೋಲ್ ರೂಂ ಟೋಲ್ ಫ್ರೀ ಸಂಖ್ಯೆ: 1077/ 0824- 2442590 ಗೆ ಕರೆ ಮಾಡುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಂ. ಆರ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
30 ಸಾವಿರ ಜನರನ್ನು ಸ್ಥಳಾಂತರ: ಬಿಪರ್‌ಜೋಯ್ ಚಂಡಮಾರುತ ಗುರುವಾರ ಸಂಜೆ ಗುಜರಾತ್ಗೆ ಅಪ್ಪಳಿಸುವ ಸಾಧ್ಯತೆ ಹೆಚ್ಚಿದೆ. ಮುನ್ನೆಚ್ಚರಿಕೆಯಿಂದ ಪಶ್ಚಿಮ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ನೆಲೆಸಿದ್ದ ಸುಮಾರು 30 ಸಾವಿರ ಜನರನ್ನು ಗುಜರಾತ್ ರಾಜ್ಯ ಸರ್ಕಾರ ಸ್ಥಳಾಂತರಿಸಿ ತ್ವರಿತ ಕಾರ್ಯ ಕೈಗೊಂಡಿದೆ. ಜೊತೆಗೆ ಇಂದು ಹೆಚ್ಚಿನ ಜನರ ಸ್ಥಳಾಂತರ ಕಾರ್ಯ ಜರುಗಿದೆ ಎಂಬ ಮಾಹಿತಿ ಕೂಡ ಲಭಿಸಿದೆ. ಗುಜರಾತ್ನ ಕಚ್ ಜಿಲ್ಲೆಯ ಜಖೌ ಬಂದರಿಗೆ ಬಿಪರ್‌ಜೋಯ್ ಚಂಡಮಾರುತವು ಅಪ್ಪಳಿಸಲಿದೆ.
ಈ ಕುರಿತು ಮಂಗಳವಾರ, ಕೇಂದ್ರ ಗೃಹ ಸಚಿವ ಅಮಿತ್ ಶಾ ವರ್ಚುಯಲ್ ಸಭೆ ನಡೆಸಿದ್ದಾರೆ. ”ಸೂಕ್ಷ್ಮ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಜನರ ರಕ್ಷಣಗೆ ಆದ್ಯತೆ ನೀಡಲು ಗುಜರಾತ್ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ. ಹಾಗೆಯೇ ಜನರನ್ನು ಸ್ಥಳಾಂತರಿಸಿರುವ ಪ್ರದೇಶಗಳಲ್ಲಿ ಅಗತ್ಯ ಸೇವೆಗಳಾದ ಆರೋಗ್ಯ ಮತ್ತು ಕುಡಿಯುವ ನೀರು, ವಿದ್ಯುತ್, ದೂರಸಂಪರ್ಕ ಸೇರಿದಂತೆ, ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಲು ತಿಳಿಸಿದ್ದಾರೆ. ಈ ಸಭೆಯಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಸಂಸದರು, ರಾಜ್ಯ ಹಾಗೂ ಕೇಂದ್ರ ಸಚಿವರು, ಶಾಸಕರು ಮತ್ತು ಎಂಟು ಜಿಲ್ಲೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
ಭೂಕುಸಿತ ಸಂಭವಿಸುವ ಸಾಧ್ಯತೆಯಿದೆ. ಸಮುದ್ರ ತೀರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಚಂಡಮಾರುತ ಹಾದು ಹೋಗಲಿರುವ ಭಾಗಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ಭಾರತೀಯ ಸೇನೆ ಮತ್ತು ಇತರ ಪಡೆಗಳನ್ನು ನೇಮಕ ಮಾಡಲಾಗಿದೆ. ತುರ್ತು ಕಾರ್ಯಾಚರಣೆಗಾಗಿ ಎನ್‌ಡಿಆರ್‌ಎಫ್ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಭಾರತೀಯ ಸೇನಾ ಪಡೆಯೂ ಕೂಡ ಎನ್‌ಡಿಆರ್‌ಎಫ್ ಜೊತೆಗೆ ಕಾರ್ಯನಿರ್ವಹಿಸಲಿದೆ. ರಕ್ಷಣಾ ಕ್ರಮಗಳ ಬಗ್ಗೆ ಸಲಹೆಗಳನ್ನು ನೀಡಲಿದೆ ಎಂದು ಮೂಲಗಳು ಹೇಳಿವೆ.