ಉಡುಪಿ: ನೆಹರು ಯುವ ಕೇಂದ್ರ ಉಡುಪಿ ಇದರ ಆಶ್ರಯದಲ್ಲಿ ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ನಗರದ ಪೂರ್ಣಪ್ರಜ್ಞ ಕಾಲೇಜಿನ ಆಡಿಟೋರಿಯಂನಲ್ಲಿ ಜಿಲ್ಲಾ ಯುವ ಉತ್ಸವ ಕಾರ್ಯಕ್ರಮವನ್ನು ಬುಧವಾರದಂದು ಉದ್ಘಾಟಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ಕೃಷಿ ಮತ್ತು ಕಲ್ಯಾಣ ರಾಜ್ಯ ಖಾತೆ ಸಚಿವ ಶೋಭಾ ಕರಂದ್ಲಾಜೆ, ಯುವ ಜನತೆ ತಾವು ಬೆಳೆಯುವುದರ ಜೊತೆಗೆ ದೇಶದ ಬೆಳವಣಿಗೆಯ ಸಂಕಲ್ಪ ಮಾಡಬೇಕು. ಮೊದಲು ಭಾರತ ದೇಶವನ್ನು ಭೀಕ್ಷುಕರ ದೇಶ, ಬಡವರ ದೇಶ, ಹಾವಾಡಿಗಾರ ದೇಶವೆಂದು ವಿದೇಶಿಗರು ಕರೆಯುತ್ತಿದ್ದರು. ವಿದೇಶಗಳಲ್ಲಿ ನಮ್ಮ ದೇಶದ ಪ್ರಧಾನಿಗಳಿಗೆ ಗೌರವ ಸಿಗುತ್ತಿರಲಿಲ್ಲ. ಅಂತಹ ಭಾರತವನ್ನು 9ವರ್ಷಗಳಲ್ಲಿ ಇಡೀ ಜಗತ್ತಿನಲ್ಲಿ ಗೌರಯುತ ಸ್ಥಾನಕ್ಕೆ ತಂದು ನಿಲ್ಲಿಸಿದ ಕೀರ್ತಿ ಪ್ರಧಾನಿ ಮೋದಿ ಅವರಿಗೆ ಸಲ್ಲುತ್ತದೆ ಎಂದರು.
ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಅಜ್ಜರಕಾಡು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಭಾಸ್ಕರ್ ಶೆಟ್ಟಿ, ಪೂರ್ಣಪ್ರಜ್ಞ ಕಾಲೇಜಿನ ಮ್ಯಾನೇಜ್ ಮೆಂಟ್ ಸಮಿತಿಯ ಡಾ. ರಾಘವೇಂದ್ರ, ನೆಹರು ಯುವ ಕೇಂದ್ರದ ಪ್ರಾದೇಶಿಕ ನಿರ್ದೇಶಕ ಎಂ.ಎನ್. ನಟರಾಜ್, ಜಿಲ್ಲಾ ಯುವ ಅಧಿಕಾರಿ ಯಶವಂತ್ ಉಪಸ್ಥಿತರಿದ್ದರು.