ಬಂಟ್ವಾಳ: ಬೆಂಗಳೂರಿಗೆ ಹೋದ ಯುವತಿ ನಾಪತ್ತೆ

ಬಂಟ್ವಾಳ: ಬೆಂಗಳೂರಿಗೆ ಹೋಗುವುದಾಗಿ ಸಂದೇಶ ಕಳುಹಿಸಿ ಯುವತಿಯೊಬ್ಬಳು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.

ಕಸ್ಬಾ ಗ್ರಾಮದ ಲೆಕ್ಕಸಿರಿ ಪಾದೆ ನಿವಾಸಿ ರಮೇಶ್ ಸಾಲಿಯಾನ್ ಎಂಬವರ ಪುತ್ರಿ ನೇಹಾ (22) ನಾಪತ್ತೆಯಾದ ಯುವತಿ. ಮಂಗಳೂರಿನ ಸುರಕ್ಷತಾ ಸಲಕರಣೆ ಅಂಗಡಿಯೊಂದರಲ್ಲಿ ಉದ್ಯೋಗಿಯಾಗಿದ್ದ ನೇಹಾ, ತನಗೆ ಮದುವೆಯ ಪ್ರಸ್ತಾಪವನ್ನು ನೋಡುತ್ತಿದ್ದ ಮನೆಯವರಲ್ಲಿ ತಾನು ಸದ್ಯಕ್ಕೆ ಮದುವೆಯಾಗುವುದಿಲ್ಲ, ತನಗಿನ್ನೂ ಹೆಚ್ಚು ಓದುವ ಆಸೆ ಇದೆ ಎಂದು ತಿಳಿಸಿದ್ದಳು.

ಮೇ 27ರಂದು ನೇಹಾ ಎಂದಿನಂತೆ ಕೆಲಸಕ್ಕೆ ಹೋಗಿದ್ದು, ಸಂಜೆ 4 ಗಂಟೆಗೆ ಚಿಕ್ಕಮ್ಮನ ಮೊಬೈಲ್‌ಗೆ ತಾನು ಬೆಂಗಳೂರಿಗೆ ಹೋಗುತ್ತಿರುವುದಾಗಿ ಸಂದೇಶ ಕಳುಹಿಸಿದ್ದು, ಬಳಿಕ ಮೊಬೈಲ್ ಆಫ್ ಮಾಡಿದ್ದಾಳೆ.

ಮೇ 29 ಮತ್ತು ಜೂನ್ 6 ರಂದು ನೇಹಾ ಮನೆಯವರಿಗೆ ಪತ್ರ ಬರೆದಿದ್ದು ತಾನು ಬೆಂಗಳೂರಿನಲ್ಲಿದ್ದೇನೆ ಮತ್ತು ತನ್ನನ್ನು ಹುಡುಕಬಾರದು ಎಂದು ಹೇಳಿದ್ದಾಳೆ. ಆ ಬಳಿಕ ಆಕೆಯಿಂದ ಯಾವುದೇ ಫೋನ್ ಕರೆ ಅಥವಾ ಸಂದೇಶಗಳು ಬಂದಿಲ್ಲ. ಅಂದಿನಿಂದ ನೇಹಾ ಬಗ್ಗೆ ಯಾವುದೇ ಸಮಾಚಾರ ಲಭ್ಯವಾಗಿಲ್ಲವಾದ್ದರಿಂದ ಆಕೆಯ ಕುಟುಂಬಸ್ಥರು ಆಕೆ ನಾಪತ್ತೆಯಾಗಿರಬಹುದು ಎಂದು ಶಂಕಿಸಿದ್ದಾರೆ. ನೇಹಾಳ ಕಿರಿಯ ಸಹೋದರ ಅವಿನಾಶ್, ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆಕೆಯನ್ನು ಪತ್ತೆ ಮಾಡಿಕೊಡುವಂತೆ ಒತ್ತಾಯಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.