ವಿದ್ಯಾರ್ಥಿಗಳ ಸಾಧನೆಯೆ ದಾನಿಗಳಿಗೆ ಪ್ರೇರಣೆ: ಡಾ. ಅಶೋಕ್ ಕಾಮತ್

ಉಡುಪಿ: ವಿದ್ಯಾರ್ಥಿಗಳು ಮಾಡುವ ಗರಿಷ್ಠ ಮಟ್ಟದ ಶೈಕ್ಷಣಿಕ ಸಾಧನೆಗಳಿಂದ ದಾನಿಗಳು ಹೆಚ್ಚು ಹೆಚ್ಚು ಪ್ರೇರಣೆ ಹೊಂದಿ ಅವರ ಶೈಕ್ಷಣಿಕ ಅವಶ್ಯಕತೆಗಳಿಗೆ ಸ್ಪಂದನ ನೀಡುವರು ಎಂದು ಶಿಕ್ಷಣ ತಜ್ಞ, ಡಯಟ್ ಉಪ ಪ್ರಾಂಶುಪಾಲ ಡಾ. ಅಶೋಕ್ ಕಾಮತ್ ಅಭಿಪ್ರಾಯಪಟ್ಟರು.

ಅವರು ಉಡುಪಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರಿಗೆ ಒನ್ ಗುಡ್ ಸ್ಟೆಪ್, ಬೆಂಗಳೂರು ಇವರು ಕೊಡ ಮಾಡಿಸಿದ ಉಚಿತ ನೋಟ್ ಪುಸ್ತಕ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

ದಾನಿ ಜಿನಿಸಿಸ್ ಪ್ಯಾಕೇಜಿಂಗ್ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕಿ ಶ್ರೀಮತಿ ನಿರಾಲಿ ವೋರಾ ಸುಮಾರು 3.5 ಲಕ್ಷ ರೂಪಾಯಿ ಮೊತ್ತದ ನೋಟ್ ಪುಸ್ತಕಗಳನ್ನು ವಿತರಿಸಿ ವಿದ್ಯಾರ್ಥಿನಿಯರಿಗೆ ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಭಾರ ಪ್ರಾಂಶುಪಾಲ ದಯಾನಂದ್ ಮಾತನಾಡಿ, ವಿದ್ಯಾರ್ಥಿಗಳು ತಾವು ಪಡೆದ ಪುಸ್ತಕಗಳನ್ನು ಸದುಪಯೋಗಪಡಿಸಿಕೊಂಡು ಸಾಧನೆ ಮಾಡಿದರೆ ದಾನ ಕೊಟ್ಟಿರುವುದಕ್ಕೂ ಪಡೆದಿರುವುದಕ್ಕೂ ಸಾರ್ಥಕತೆ ಉಂಟಾಗುತ್ತದೆ ಎಂದು ಹೇಳಿದರು.

ಶಾಲೆಯ ಎಸ್ ಡಿ ಎಂ ಸಿ ಕಾರ್ಯಾಧ್ಯಕ್ಷೆ ಶ್ರೀಮತಿ ತಾರಾದೇವಿ, ನವನೀತ್ ಪಬ್ಲಿಕೇಶನ್ ಬೆಂಗಳೂರು ಇವರಿಂದ ಉತ್ತಮ ಗುಣಮಟ್ಟದ ನೋಟ್ ಪುಸ್ತಕಗಳನ್ನು ಪೂರೈಸುವಲ್ಲಿ ಸಹಕರಿಸಿದ ಒನ್ ಗುಡ್ ಸ್ಟೆಪ್ ನ ಶ್ರೀಮತಿ ಅಮಿತಾ ಪೈ ಉಪಸ್ಥಿತರಿದ್ದು ಶುಭಹಾರೈಸಿದರು.

ಮುಖ್ಯ ಶಿಕ್ಷಕಿ ಇಂದಿರಾ ಸ್ವಾಗತಿಸಿದರು. ಶಿಕ್ಷಕ ರಾಮಚಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಜ್ಯೋತಿ ವಂದಿಸಿದರು.