ಬೆಂಗಳೂರು: ಪಂಚ ಗ್ಯಾರಂಟಿಗಳಲ್ಲಿ ಮೊದಲನೇಯದಾಗಿ ಶಕ್ತಿ ಯೋಜನೆಗೆ ಭಾನುವಾರ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.
ಕಾಂಗ್ರೆಸ್ ಘೋಷಿಸಿದ ಗೊಂದಲ ರಹಿತ ಮೊದಲ ಗ್ಯಾರಂಟಿ ಯೋಜನೆ ಎರಡನೇ ದಿನವೂ ಯಶಸ್ವಿ ಲಕ್ಷಣಗಳನ್ನು ತೋರಿದೆ. ಉಚಿತ ಪ್ರಯಾಣವನ್ನು ಮಹಿಳೆಯರು ಸದುಪಯೋಗ ಪಡಿಸಿಕೊಳ್ಳುತ್ತಿದ್ದು, ಬಸ್ನಲ್ಲಿ ಭರ್ಜರಿ ತಿರುಗಾಟ ನಡೆಸಿದ್ದಾರೆ.
ಈ ಯೋಜನೆ ಮೊದಲ ದಿನ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಎರಡನೇ ದಿನವಾದ ಸೋಮವಾರವೂ ಮಹಿಳೆಯರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
ಭಾನುವಾರ ವಿಧಾನಸೌಧದಲ್ಲಿ ಚಾಲನೆ ಸಿಕ್ಕ ಶಕ್ತಿ ಗ್ಯಾರಂಟಿ ಯೋಜನೆಯನ್ನು ರಾಜ್ಯದ ಮಹಿಳೆಯರು ಮುಕ್ತ ಮನಸ್ಸಿನಿಂದ ಒಪ್ಪಿಕೊಂಡಿದ್ದಾರೆ. ಶಕ್ತಿ ಯೋಜನೆ ಚಾಲನೆಯಾದ ಎರಡನೇ ದಿನವಾದ ಸೋಮವಾರ ಮಧ್ಯರಾತ್ರಿ 12 ಗಂಟೆವರೆಗೆ ಎಲ್ಲಾ ನಾಲ್ಕು ರಸ್ತೆ ಸಾರಿಗೆ ನಿಗಮಗಳಲ್ಲಿ ಬರೋಬ್ಬರಿ 41,34,726 ಮಹಿಳಾ ಪ್ರಯಾಣಿಕರು ಉಚಿತ ಪಯಣ ನಡೆಸಿದ್ದಾರೆ. ಇದಕ್ಕೆ ಒಟ್ಟು 8.83 ಕೋಟಿ ರೂ. ವೆಚ್ಚವನ್ನು ಸರ್ಕಾರ ತುಂಬ ಬೇಕಾಗಿದೆ.
ನಿನ್ನೆ ಮಧ್ಯರಾತ್ರಿವರೆಗೆ ಕೆಎಸ್ಆರ್ಟಿಸಿಯಲ್ಲಿ 11,40,057 ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಇದರಿಂದ ಕೆಎಸ್ಆರ್ಟಿಸಿಗೆ 3.57 ಕೋಟಿ ರೂ. ವೆಚ್ಚ ತಗುಲಿದೆ. ಇನ್ನು ಬಿಎಂಟಿಸಿಯಲ್ಲಿ 17,57,887 ಮಹಿಳೆಯರು ಪ್ರಯಾಣ ಮಾಡಿದ್ದು, ಇದಕ್ಕೆ 1.75 ಕೋಟಿ ರೂ. ವೆಚ್ಚವಾಗಿದೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆಯಲ್ಲಿ 8,31,840 ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಇದಕ್ಕೆ 2.10 ಕೋಟಿ ರೂ. ವೆಚ್ಚ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆಯಲ್ಲಿ ಪ್ರಯಾಣಿಸಿದ ಮಹಿಳಾ ಪ್ರಯಾಣಿಕರು 4,04,942, ತಗುಲುವುವ ವೆಚ್ಚ 1.39 ಕೋಟಿ ಆಗಿದೆ.
ಭಾನುವಾರ ಸಿಎಂ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಯೋಜನೆಗೆ ಚಾಲನೆ ನೀಡಿದ್ದರು. ಅಂದು ಮೊದಲ ದಿನ ಮಧ್ಯಾಹ್ನ 1 ಗಂಟೆಯಿಂದ ಮಧ್ಯರಾತ್ರಿ 12 ಗಂಟೆವರೆಗೆ ಶಕ್ತಿ ಯೋಜನೆಯಡಿ ಸುಮಾರು 5,71,23 ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದರು. ಕೆಎಸ್ಆರ್ ಟಿಸಿ, ಬಿಎಂಟಿಸಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಒಟ್ಟು ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ 1.40 ಕೋಟಿ ರೂ. ಆಗಿತ್ತು.
ಮೊದಲ ದಿನ: ಯೋಜನೆ ಜಾರಿಗೊಂಡ ಬೆನ್ನಲ್ಲೇ ಸಾಕಷ್ಟು ಮಹಿಳೆಯರು ಉಚಿತ ಪ್ರಯಾಣ ಸೌಲಭ್ಯದ ಲಾಭವನ್ನು ಪಡೆದುಕೊಂಡಿದ್ದಾರೆ. ಮೊದಲ ದಿನ ಭಾನುವಾರ ಮಧ್ಯರಾತ್ರಿವರೆಗೆ ಕೆಎಸ್ಆರ್ಟಿಸಿಯಲ್ಲಿ 1,93,83 ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದರು.
ಉಚಿತ ಪ್ರಯಾಣಕ್ಕೆ ಆದರೆ, ಟಿಕೆಟ್ ಕಡ್ಡಾಯ: ಉಚಿತ ಪ್ರಯಾಣ ಮಾಡುವ ಮಹಿಳೆಯರು ಕರ್ನಾಟಕದ ನಿವಾಸಿಗಳು ಎಂದು ಸಾಕ್ಷೀಕರಿಸಲು ಯಾವುದಾದರೂ ಒಂದು ದಾಖಲಾತಿಯನ್ನು ತೋರಿಸಬೇಕು ಎಂದಿದೆ. ಅಂದರೆ ರಾಜ್ಯದ ವಿಳಾಸವಿರುವ ಭಾವಚಿತ್ರ ಸಹಿತ ಅಧಿಕೃತ ದಾಖಲೆಗಳ ಮೂಲ ಪ್ರತಿ, ನಕಲು, ಡಿಜಿಲಾಕರ್ (ಹಾರ್ಡ್ ಮತ್ತು ಸಾಫ್ಟ್ ಕಾಪಿ) ಮಾದರಿಯ ಗುರುತಿನ ದಾಖಲೆಗಳನ್ನು ಮಾನ್ಯ ಮಾಡಲು ನಿರ್ಧರಿಸಲಾಗಿದೆ. ಸಾರಿಗೆ ಇಲಾಖೆ ಮತ್ತು ಸರ್ಕಾರಕ್ಕೆ ಲೆಕ್ಕಕ್ಕಾಗಿ ಮಹಿಳೆಯರಿಗೆ ಪ್ರಯಾಣ ಉಚಿತ ಆದರೆ, ಟಿಕೆಟ್ ಪಡೆಯುವುದು ಕಡ್ಡಾಯವಾಗಿದೆ.
ಇದರಿಂದ ಕೆಎಸ್ಆರ್ಟಿಸಿಗೆ 58.16 ಲಕ್ಷ ವೆಚ್ಚ ತಗುಲಿತ್ತು. ಇನ್ನು ಬಿಎಂಟಿಸಿಯಲ್ಲಿ 2,01,215 ಮಹಿಳೆಯರು ಪ್ರಯಾಣ ಮಾಡಿದ್ದು, ಇದಕ್ಕೆ 26.19 ಲಕ್ಷ ವೆಚ್ಚವಾಗಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆಯಲ್ಲಿ 1,22,354 ಲಕ್ಷ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಇದಕ್ಕೆ 36.16 ಲಕ್ಷ ವೆಚ್ಚವಾಗಿತ್ತು. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆಯಲ್ಲಿ ಪ್ರಯಾಣಸಿದ ಮಹಿಳಾ ಪ್ರಯಾಣಿಕರು 53,623, ತಗುಲಿದ ವೆಚ್ಚ19.70 ಲಕ್ಷವಾಗಿದೆ.