ಉಡುಪಿ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸದಸ್ಯ ಕಾರ್ಯದರ್ಶಿ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೆರೆ ಸಂರಕ್ಷಣಾ ಇಲಾಖೆಯ ಸದಸ್ಯ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶ ಸಂದೀಪ್ ಸಾಲಿಯಾನ್ ಇವರ ನೇತೃತ್ವದಲ್ಲಿ ಐಲೇಸಾ ತಂಡ ನೀರು ಮತ್ತು ಕೆರೆ ಸಂರಕ್ಷಣೆಯ ಸಲುವಾಗಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಬೆಂಗಳೂರು ಜೊತೆ ಸೇರಿ ಊರಿಗೊಂದು ಕೆರೆ ಎನ್ನುವ ವಿಶಿಷ್ಟ ಕಾರ್ಯಕ್ರಮವನ್ನು ಜೂನ್ 11 ರಂದು ಝೂಮ್ ವರ್ಚುವಲ್ ವೇದಿಕೆಯಲ್ಲಿ ಉದ್ಘಾಟಿಸಲಾಯಿತು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೆರೆ ಸಂರಕ್ಷಣಾ ಇಲಾಖೆಯ ಸದಸ್ಯ ಹಿರಿಯ ಸಿವಿಲ್ ನ್ಯಾಯಾಧೀಶ ಸಂದೀಪ್ ಸಾಲಿಯಾನ್ ಅವರು ಕೆರೆ ಸಂರಕ್ಷಣೆಯ ಬಗ್ಗೆ ಕಾನೂನು ಜಾಗೃತಿ ಮೂಡಿಸಿ ಆನೇಕಲ್ ಹೊಸಕೋಟೆ ಮತ್ತು ದೊಡ್ಡ ಬಳ್ಳಾಪುರದಲ್ಲಿ ತಾನು ಮುತುವರ್ಜಿ ವಹಿಸಿಕೊಂಡು ಸ್ವಚ್ಛ ಗೊಳಿಸಿದ ಕೆರೆಗಳ ಬಗ್ಗೆ ಮತ್ತು ಕೆರೆ ಸ್ವಚ್ಛತೆಗೆ ಕಾನೂನಾತ್ಮಕವಾಗಿ ಯಾವೆಲ್ಲಾ ಪ್ರಯತ್ನಗಳನ್ನು ಜನರು ಮಾಡಬಹುದೆನ್ನುವ ಬಗ್ಗೆ,ಮುಂದಿನ ಪೀಳಿಗೆಗೆ ಶುದ್ಧ ನೀರಿನ ಅವಶ್ಯಕತೆಯನ್ನು ಹಸ್ತಾ೦ತರಿಸುವ ನಮ್ಮ ಜವಾಬ್ದಾರಿಗಳ ಬಗ್ಗೆಯೂ ತಿಳಿಸಿಕೊಟ್ಟರು.
ನ್ಯಾಯಾಧೀಶ ಸಂದೀಪ್ ಸಾಲಿಯಾನ್ ಈ ಹಿಂದೆ ಒಂದೇ ದಿನದಲ್ಲಿ ಪ್ರಕೃತಿ ಸಂರಕ್ಷಣೆ, ಅಪ್ರಾಪ್ತರ ಲೈಂಗಿಕ ದೌರ್ಜನ್ಯ ಮತ್ತು ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಒಂದೇ ದಿನದಲ್ಲಿ 7800 ಕಾರ್ಯಕ್ರಮಗಳನ್ನು ಹೊಸಕೋಟೆ ಜಿಲ್ಲೆಯ ಬೇರೆ ಬೇರೆ ಕಡೆ ನಡೆಸಿ ಗಮನ ಸೆಳೆದಿದ್ದಾರೆ. ಜೂನ್ 5 ನಡೆದ ಪರಿಸರ ದಿನದಲ್ಲಿ ಏಕಕಾಲಕ್ಕೆ 30000 ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಪ್ರೇರಣೆಯಾಗಿದ್ದಾರೆ. ಕೆರೆಗಳ ಸ್ವಚ್ಛತೆ ಮತ್ತು ಪುನರುಜ್ಜೀವನದ ಅಭಿಯಾನವನ್ನು ಕರ್ನಾಟಕದಾದ್ಯಂತ ಮುಂದುವರಿಸಬೇಕೆನ್ನುವುದು ಅವರ ಮಹತ್ವಾಕಾಂಕ್ಷೆ.
ಬೆಂಗಳೂರು ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಸಭಾಪತಿ ಬಾಲಕೃಷ್ಣ ಶೆಟ್ಟಿಯವರು ಕಾರ್ಯಕ್ರಮದಲ್ಲಿ ಭಾಗವಹಿ ರೆಡ್ ಕ್ರಾಸ್ ಸಂಸ್ಥೆಯ ಪಾಲ್ಗೊಳ್ಳುವಿಕೆ ಮತ್ತು ಸಹಾಯದ ಬಗ್ಗೆ ತಿಳಿಸಿಕೊಟ್ಟರು. ರಕ್ತದಾನ, ನೀರು ಸಂರಕ್ಷಣೆ, ಕೆರೆ ಸ್ವಚ್ಛತೆ, ಮಕ್ಕಳ ಮಾದಕ ವ್ಯಸನ, ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯ, ವಾತಾವರಣದ ತಾಪಮಾನ ಏರಿಕೆ ಹೀಗೆ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗುವ ಬಾಲಕೃಷ್ಣ ಶೆಟ್ಟಿ ಇವರು ಐಲೇಸಾದ ಕೆರೆ ಸಂರಕ್ಷಣೆ ಅಭಿಯಾನದಲ್ಲಿ ತಮ್ಮ ಸಂಸ್ಥೆಯ ಪೂರ್ಣ ಸಹಕಾರ ನೀಡುತ್ತಿದ್ದಾರೆ.
ಲೇಕ್ ಲೀಡರ್ಸ್ ಮತ್ತು ವಾಟರ್ ವಾರಿಯರ್ಸ್ ತಂಡಗಳ ಮೂಲಕ ಅಭಿಯಾನ
ಊರಿಗೊಂದು ಕೆರೆ ಅಭಿಯಾನಕ್ಕೆ ಪ್ರತಿ ಊರಿನಲ್ಲಿ ತಲಾ ಕನಿಷ್ಠ ಹತ್ತು ಮಂದಿಯ ತಂಡವನ್ನು ರಚಿಸಿ ಅವರನ್ನು ಕೆರೆ ಸಂರಕ್ಷಣೆ ಮತ್ತು ನೀರು ಸಂರಕ್ಷಣೆ ಕಾರ್ಯಕ್ಕೆ ನಿಯೋಗಿಸುವ ಸಲುವಾಗಿ ಕ್ರಮವಾಗಿ ಲೇಕ್ ಲೀಡರ್ಸ್ ಮತ್ತು ವಾಟರ್ ವಾರಿಯರ್ಸ್ ಎಂದು ಆಯ್ಕೆ ಮಾಡಲಾಗುವುದು ಮತ್ತು ಎಲ್ಲ ತಂಡಗಳಿಗೆ ಮೂರೂ ಸಂಸ್ಥೆಗಳ ಸಹಯೋಗದಲ್ಲಿ ಬೇಕಾದ ಎಲ್ಲ ಸಹಕಾರ ಸಲಹೆ ಸಹಾಯಗಳನ್ನು ಮಾಡಲು ತೀರ್ಮಾನಿಸಲಾಗಿದೆ. ಐಲೇಸಾದ ಈ ಹಿಂದಿನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ನೀರಿನ ಸಂರಕ್ಷಣೆಯ ಬಗ್ಗೆ ವಿಶೇಷ ಸಲಹೆಗಳನ್ನು ನೀಡಿದ ಖಲೀಫಾ ಯೂನಿವರ್ಸಿಟಿಯ ಡಾ. ದಿನೇಶ್ ಶೆಟ್ಟಿಯವರು ತಾಂತ್ರಿಕ ಸಲಹೆಗಳನ್ನು ನೀಡಲು ಲಭ್ಯವಿರುತ್ತಾರೆ ಎಂದು ಐಲೇಸಾದ ಅನಂತ್ ರಾವ್ ಮತ್ತು ಐಲೇಸಾ ಮಾಧ್ಯಮ ಸಂಚಾಲಕ ಸೂರಿ ಮಾರ್ನಾಡ್ ತಿಳಿಸಿದ್ದಾರೆ.