ಆರ್​ಆರ್​ಆರ್​​, ಪಠಾಣ್​ ದಾಖಲೆಗಳು ಮುರಿದು 24 ಗಂಟೆಯಲ್ಲಿ 36 ಸಾವಿರ ‘ಆದಿಪುರುಷ್’ ಟಿಕೆಟ್​ಗಳ ಮಾರಾಟ..

ನಾಲ್ಕು ದಿನಗಳಲ್ಲಿ ಚಿತ್ರ ಥಿಯೇಟರ್‌ಗೆ ಬರಲಿದೆ. ಆದರೆ, ಆದಿಪುರುಷ್​ ಬಿಡುಗಡೆಗೂ ಮುನ್ನವೇ ಮುಗಂಡ ಟಿಕೆಟ್ ಮಾರಾಟದಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಚಿತ್ರದ ಆನ್‌ಲೈನ್ ಮುಂಗಡ ಟಿಕೆಟ್ ಮಾರಾಟವು ಈಗಾಗಲೇ ಆರ್​ಆರ್​ಆರ್​ ಮತ್ತು ಕೆಜಿಎಫ್​ ಅನ್ನು ಮೀರಿಸಿದೆ. ಜೊತೆಗೆ ಶಾರುಖ್ ನಟನೆಯ ಬ್ಲಾಕ್​ ಬಸ್ಟರ್​ ಹಿಂದಿ ಚಲನಚಿತ್ರ ‘ಪಠಾಣ್’ ದಾಖಲೆಯನ್ನು ಕೂಡ ಹಿಂದಿಕ್ಕಿದೆ.

ರಾಮಾಯಣ ಮಹಾಕಾವ್ಯವನ್ನು ಆಧರಿಸಿದ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ‘ಆದಿಪುರುಷ್’​ ಚಿತ್ರದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ.’ಆದಿಪುರುಷ್’ ಚಿತ್ರದ​ ಮುಂಗಡ ಬುಕ್ಕಿಂಗ್ ಆರಂಭವಾಗಿ 24 ಗಂಟೆಗಳು ಕಳೆಯುವ ಮುನ್ನವೇ 36 ಸಾವಿರ ಟಿಕೆಟ್​ಗಳು ಮಾರಾಟವಾಗಿದೆ.

ದೇಶದೆಲ್ಲೆಡೆ ಆದಿಪುರುಷ್​ ಚಿತ್ರದ ಮುಂಗಡ ಬುಕ್ಕಿಂಗ್‌ ಈಗಾಗಲೇ ಆರಂಭವಾಗಿದೆ. ಆದರೆ ಮುಂಗಡ ಬುಕ್ಕಿಂಗ್ ಆರಂಭವಾಗಿ 24 ಗಂಟೆಗಳು ಕಳೆಯುವ ಮುನ್ನವೇ ಚಿತ್ರ ಹಲವು ದಾಖಲೆಗಳನ್ನು ಮುರಿದಿದೆ. ಮೂಲಗಳ ಪ್ರಕಾರ, ಚಿತ್ರದ ಹಿಂದಿ ಆವೃತ್ತಿಯು ಮುಂಗಡ ಬುಕಿಂಗ್‌ನಲ್ಲಿ 1.40 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ಮೊದಲ ದಿನವೇ 36 ಸಾವಿರ ಟಿಕೆಟ್ ಮಾರಾಟವಾಗಿದೆ. ಒಂದೇ ದಿನ ಚಿತ್ರವು ದೇಶದಾದ್ಯಂತ (ಎಲ್ಲ ಭಾಷೆಗಳನ್ನು ಒಳಗೊಂಡಂತೆ) 1.62 ಕೋಟಿ ರೂಪಾಯಿಗಳ ಟಿಕೆಟ್‌ಗಳ ಮಾರಾಟವನ್ನು ಕಂಡಿದೆ.

ಆದಿಪುರುಷ್​ ಹನುಮಾನ್​ಗೆ ಸೀಟು ಮೀಸಲು: ಟಿಕೆಟ್ ಮಾರಾಟದಲ್ಲಿ ಚಿತ್ರತಂಡ ಮಹತ್ವದ ನಿರ್ಧಾರ ಕೈಗೊಂಡಿದೆ. ರಾಮಾಯಣ ಪಾರಾಯಣ ನಡೆಯುವ ಸ್ಥಳಕ್ಕೆ ಹನುಮಂತ ದೇವರು ಬರುತ್ತಾನೆ ಎಂಬ ನಂಬಿಕೆಯನ್ನು ಗೌರವಿಸಿ, ಚಿತ್ರ ಪ್ರದರ್ಶನಗೊಳ್ಳುವ ಪ್ರತಿ ಥಿಯೇಟರ್‌ನಲ್ಲಿ ಹನುಮಂತ ದೇವರಿಗೆ ಆಸನವನ್ನು ಮೀಸಲಿಡಲಾಗುವುದು ಎಂದು ಘೋಷಿಸಲಾಗಿದೆ.
ಆದಿಪುರುಷ್​ ಚಿತ್ರವನ್ನು ಎಲ್ಲರೂ ನೋಡಬೇಕು ಎಂಬ ಉದ್ದೇಶದಿಂದ ಬಾಲಿವುಡ್​ ನಟ ರಣಬೀರ್​ ಕಪೂರ್ 10 ಸಾವಿರ ಟಿಕೆಟ್​ ಖರೀದಿಸಿದ್ದಾರೆ.

ಪಂಚ ಭಾಷೆಯಲ್ಲಿ ಬಿಡುಗಡೆಯಾಗಲಿರುವ ಆದಿಪುರುಷ್​’ ಸಿನಿಮಾವು ತೆಲುಗು, ಹಿಂದಿ, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ರಪಂಚದಾದ್ಯಂತ ಜೂನ್​ 16ರಂದು ಬಿಡುಗಡೆ ಆಗಲಿದೆ. ಚಿತ್ರದಲ್ಲಿ ಪ್ರಭಾಸ್​ ರಾಮನಾಗಿ, ಕೃತಿ ಸನೋನ್​ ಸೀತೆಯಾಗಿ, ಸನ್ನಿ ಸಿಂಗ್​ ಲಕ್ಷ್ಮಣನಾಗಿ ಮತ್ತು ಸೈಫ್​ ಅಲಿ ಖಾನ್​ ರಾವಣನಾಗಿ ನಟಿಸಿದ್ದಾರೆ.

ಆ ಟಿಕೆಟ್​ಗಳನ್ನು ಎನ್​ಜಿಒ ಸಂಸ್ಥೆಯ ಮೂಲಕ ಬಡ ಮಕ್ಕಳಿಗೆ ಕೊಡಲು ನಿರ್ಧರಿಸಿದ್ದಾರೆ. ರಣಬೀರ್​ ಅವರ ಈ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ​ಕಾರ್ತಿಕೇಯ-2 ಮತ್ತು ಕಾಶ್ಮೀರ ಫೈಲ್ಸ್ ಚಿತ್ರಗಳ ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಕೂಡ 10 ಸಾವಿರ ಟಿಕೆಟ್ ಖರೀದಿಸಿದ್ದಾರೆ. ತೆಲಂಗಾಣದ ಸರ್ಕಾರಿ ಶಾಲೆಗಳು, ಅನಾಥಾಶ್ರಮಗಳು ಮತ್ತು ವೃದ್ಧಾಶ್ರಮಗಳಿಗೆ ಸೇರಿದವರಿಗೆ ಈ ಟಿಕೆಟ್‌ಗಳನ್ನು ಒದಗಿಸಲಾಗುತ್ತದೆ. ತೆಲುಗು ಮತ್ತು ಹಿಂದಿಯ ಹಲವು ಸೆಲೆಬ್ರಿಟಿಗಳು ಬಿಡುಗಡೆಗೂ ಮುನ್ನವೇ ಹೆಚ್ಚಿನ ಸಂಖ್ಯೆಯಲ್ಲಿ ಆದಿಪುರುಷ ಟಿಕೆಟ್ ಖರೀದಿಸುತ್ತಿದ್ದು, ಆ ಸಿನಿಮಾದ ನಿರೀಕ್ಷೆ ದುಪ್ಪಟ್ಟಾಗಿದೆ.