ನವದೆಹಲಿ: “ಬಿಸಿಸಿಐ ಕರಡು ವೇಳಾಪಟ್ಟಿಯನ್ನು ಐಸಿಸಿಯೊಂದಿಗೆ ಹಂಚಿಕೊಂಡಿದೆ, ಮುಂದಿನ ವಾರದ ಆರಂಭದಲ್ಲಿ ಅಂತಿಮ ವೇಳಾಪಟ್ಟಿಯನ್ನು ಹೊರತರುವ ಮೊದಲು ಭಾಗವಹಿಸುವ ದೇಶಗಳಿಗೆ ಪ್ರತಿಕ್ರಿಯೆಗಾಗಿ ಕಳುಹಿಸಲಾಗಿದೆ” ಎಂದು ಸುದ್ದಿ ಮಾಧ್ಯಮ ಒಂದು ವರದಿ ಮಾಡಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ವೇಳೆ ಭಾರತದಲ್ಲಿ ಈ ವರ್ಷ ಅಂತ್ಯಕ್ಕೆ ನಡೆಯುವ ವಿಶ್ವಕಪ್ನ ವೇಳಾ ಪಟ್ಟಿ ಪ್ರಕಟ ಆಗಲಿದೆ ಎಂದು ಹೇಳಲಾಗಿತ್ತು.ಭಾರತದಲ್ಲಿ ನಡೆಯುವ ವಿಶ್ವಕಪ್ಗೆ ಇನ್ನು ನಾಲ್ಕು ತಿಂಗಳು ಮಾತ್ರ ಬಾಕಿ ಇದೆ. ಆದರೆ ಐಸಿಸಿ ಇನ್ನೂ ವೇಳಾ ಪಟ್ಟಿಯನ್ನು ಪ್ರಕಟಿಸಿಲ್ಲ. ಭಾರತ ಕರಡು ಪ್ರತಿಯನ್ನು ಐಸಿಸಿಗೆ ಸಲ್ಲಿಸಿದ್ದು, ಮುಂದಿನ ವಾರದಲ್ಲಿ ಅಧಿಕೃತ ವೇಳಾ ಪಟ್ಟಿ ಪ್ರಕಟವಾಗಲಿದೆ
ಆದರೆ ಇನ್ನೂ ಪ್ರಕಟವಾಗಿಲ್ಲ. ಕರಡು ವೇಳಾಪಟ್ಟಿಯ ಪ್ರಕಾರ ಭಾರತ ಅಕ್ಟೋಬರ್ 8 ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ತಮ್ಮ ಏಕದಿನ ವಿಶ್ವಕಪ್ನ ಮೊದಲ ಪಂದ್ಯವನ್ನು ಆಡಲಿದೆ. ಅಕ್ಟೋಬರ್ 15 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಗುಜರಾತ್ನ ಅಹಮದಾಬಾದ್ನಲ್ಲಿ ಭಾರತ ಕಣಕ್ಕಿಳಿಯಲಿದೆ ಎಂದು ಕರಡು ವೇಳಾಪಟ್ಟಿಯಲ್ಲಿ ಇದೆ.
ಆರಂಭಿಕ ಡ್ರಾಫ್ಟ್ ಪ್ರಕಾರ, ಪಂದ್ಯಾವಳಿಯು ಅಕ್ಟೋಬರ್ 5 ರಂದು ಹಾಲಿ ಚಾಂಪಿಯನ್ ಇಂಗ್ಲೆಂಡ್ ಕಳೆದ ಆವೃತ್ತಿಯ ರನ್ನರ್ ಅಪ್ ತಂಡ ನ್ಯೂಜಿಲೆಂಡ್ ಅನ್ನು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯವನ್ನು ಆಡಲಿದೆ. ನವೆಂಬರ್ 19 ರಂದು ಫೈನಲ್‌ಗೆ ಅದೇ ನರೇಂದ್ರ ಮೋದಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
ನವೆಂಬರ್ 15 ಮತ್ತು 16 ರಂದು ನಡೆಯಲಿರುವ ಸೆಮಿಫೈನಲ್ ಪಂದ್ಯಗಳ ಸ್ಥಳಗಳನ್ನು ಇನ್ನೂ ನಿರ್ಧರಿಸಲಾಗಿಲ್ಲ. 2011 ರಲ್ಲಿ ಸ್ವದೇಶದಲ್ಲಿ ಕೊನೆಯ ಬಾರಿಗೆ ಏಕದಿನ ವಿಶ್ವಕಪ್ ಗೆದ್ದ ಆತಿಥೇಯ ಭಾರತ, ಕೋಲ್ಕತ್ತಾ, ಮುಂಬೈ, ನವದೆಹಲಿ ಮತ್ತು ಬೆಂಗಳೂರು ಸೇರಿದಂತೆ ಒಂಬತ್ತು ನಗರಗಳಲ್ಲಿ ಲೀಗ್ ಹಂತದ ಪಂದ್ಯಗಳನ್ನು ಆಡಲಿದೆ.
ಅಕ್ಟೋಬರ್ 15 ರಂದು ಗುಜರಾತ್ನಲ್ಲಿ ಪಾಕಿಸ್ತಾನವನ್ನು ಭಾರತ ಎದುರಿಸಲಿದೆ ಎಂದು ಕರುಡು ಪ್ರತಿಯಲ್ಲಿ ತಿಳಿಸಲಾಗಿದೆ. ಆದರೆ ಇತ್ತೀಚೆಗೆ ಪಾಕಿಸ್ತಾನಕ್ಕೆ ಐಸಿಸಿ ನಿಯೋಗ ಭೇಟಿ ಕೊಟ್ಟಾಗ ಇಂಡಿಯಾ-ಪಾಕ್ ಪಂದ್ಯವನ್ನು ಗುಜರಾತ್ನಲ್ಲಿ ಆಡಿಸದಂತೆ ಮನವಿ ಮಾಡಿದ್ದರು ಎಂದಿತ್ತು.
ಪಾಕಿಸ್ತಾನ ತನ್ನ ಲೀಗ್ ಪಂದ್ಯಗಳನ್ನು ಐದು ನಗರಗಳಲ್ಲಿ ಆಡಲಿದೆ. ಅಕ್ಟೋಬರ್ 6 ಮತ್ತು 12 ರಂದು ಹೈದರಾಬಾದ್‌ನಲ್ಲಿ ಕ್ವಾಲಿಫೈಯರ್‌ನಿಂದ ಆಯ್ಕೆ ಆಗಿ ಬಂದ ತಂಡಗಳೊಂದಿಗೆ ಆಡಿದರೆ, ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್ 20 ರಂದು ಬೆಂಗಳೂರಿನಲ್ಲಿ, ಅಫ್ಘಾನಿಸ್ತಾನ (ಅಕ್ಟೋಬರ್ 23) ಮತ್ತು ದಕ್ಷಿಣ ಆಫ್ರಿಕಾ (ಅಕ್ಟೋಬರ್ 27) ವಿರುದ್ಧ ಚೆನ್ನೈನಲ್ಲಿ, ಬಾಂಗ್ಲಾದೇಶ (ಅಕ್ಟೋಬರ್ 31) ಮತ್ತು ಇಂಗ್ಲೆಂಡ್ (ನವೆಂಬರ್ 12) ಎದುರು ಕೋಲ್ಕತ್ತಾದಲ್ಲಿ ಹಾಗೇ ನ್ಯೂಜಿಲೆಂಡ್ (ನವೆಂಬರ್ 5) ಬೆಂಗಳೂರಿನಲ್ಲಿ ಪಾಕಿಸ್ತಾನ ಆಡಲಿದೆ.
ಭಾರತದ ತಾತ್ಕಾಲಿಕ ವೇಳಾಪಟ್ಟಿ
ಭಾರತ vs ಆಸ್ಟ್ರೇಲಿಯಾ, ಅಕ್ಟೋಬರ್ 8, ಚೆನ್ನೈ
ಭಾರತ vs ಅಫ್ಘಾನಿಸ್ತಾನ, ಅಕ್ಟೋಬರ್ 11, ದೆಹಲಿ
ಭಾರತ vs ಪಾಕಿಸ್ತಾನ, ಅಕ್ಟೋಬರ್ 15, ಅಹಮದಾಬಾದ್
ಭಾರತ vs ಬಾಂಗ್ಲಾದೇಶ, ಅಕ್ಟೋಬರ್ 19, ಪುಣೆ
ಭಾರತ vs ನ್ಯೂಜಿಲೆಂಡ್, ಅಕ್ಟೋಬರ್ 22, ಧರ್ಮಶಾಲಾ
ಭಾರತ vs ಇಂಗ್ಲೆಂಡ್, ಅಕ್ಟೋಬರ್ 29, ಲಕ್ನೋ
ಭಾರತ vs ಕ್ವಾಲಿಫೈಯರ್, ನವೆಂಬರ್ 2, ಮುಂಬೈ
ಭಾರತ vs ದಕ್ಷಿಣ ಆಫ್ರಿಕಾ, ನವೆಂಬರ್ 5, ಕೋಲ್ಕತ್ತಾ
ಭಾರತ vs ಕ್ವಾಲಿಫೈಯರ್, ನವೆಂಬರ್ 11, ಬೆಂಗಳೂರು.
ಟೂರ್ನಿಯಲ್ಲಿ ಒಟ್ಟು 10 ತಂಡಗಳು ಭಾಗವಹಿಸಲಿವೆ. ಈ ಪೈಕಿ ಎಂಟು ತಂಡಗಳನ್ನು ಈಗಾಗಲೇ ನಿರ್ಧರಿಸಲಾಗಿದ್ದು, ಇನ್ನೆರಡು ತಂಡಗಳು ಅರ್ಹತಾ ಸುತ್ತಿನ ಮೂಲಕ ಮುಖ್ಯ ಟೂರ್ನಿಗೆ ಅರ್ಹತೆ ಪಡೆಯಲಿವೆ.