ಭೋಪಾಲ್ (ಮಧ್ಯಪ್ರದೇಶ): ಸರ್ಕಾರಿ ಕಚೇರಿಗಳನ್ನು ಹೊಂದಿರುವ ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿರುವ ಘಟನೆ ಇಂದು ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನಲ್ಲಿ ನಡೆದಿದೆ.ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನಲ್ಲಿ ಸರ್ಕಾರಿ ಕಚೇರಿಗಳನ್ನು ಹೊಂದಿರುವ ಸಾತ್ಪುರ ಭವನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಹಲವು ದಾಖಲೆಗಳು ಹಾಗೂ ಕಂಪ್ಯೂಟರ್ಗಳು ಬೆಂಕಿಗಾಹುತಿಯಾಗಿವೆ ಎನ್ನಲಾಗಿದೆ.
ಬೆಂಕಿಯು ಕ್ಷಣಾರ್ಧದಲ್ಲಿ ಬಹುದೊಡ್ಡ ರೂಪ ಪಡೆದಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಆರು ವಾಹನಗಳ ಸಮೇತ ಸ್ಥಳಕ್ಕೆ ದೌಡಾಯಿಸಿ, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಇಲ್ಲಿನ ಆಡಳಿತ ಕಟ್ಟಡವಾದ ಸಾತ್ಪುರ ಭವನದ ಬುಡಕಟ್ಟು ಕಲ್ಯಾಣ ಇಲಾಖೆಯಲ್ಲಿ ಇಂದು ಹಠಾತ್ ಬೆಂಕಿ ಕಾಣಿಸಿಕೊಂಡಿದೆ. ಮೂರನೇ ಮಹಡಿಯಲ್ಲಿ ಹೊತ್ತಿಕೊಂಡು ಬೆಂಕಿಯ ಕಿಡಿ ನಾಲ್ಕನೇ ಮಹಡಿಗೆ ಹಬ್ಬಿದೆ. ಇಲ್ಲಿಯೇ ಆರೋಗ್ಯ ಇಲಾಖೆಯ ಕಚೇರಿ ಸಹ ಇದೆ. ಬೆಂಕಿ ಅವಘಡ ಸಂಭವಿಸಿದ ತಕ್ಷಣ ಕಚೇರಿಯಲ್ಲಿದ್ದ ನೌಕರರನ್ನು ಸ್ಥಳಾಂತರಿಸಲಾಗಿದೆ.
ಅಗ್ನಿ ಅವಘಡದ ಮಾಹಿತಿ ಸಿಕ್ಕ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತಲುಪಿ ಬೆಂಕಿಯನ್ನು ಹತೋಟಿಗೆ ತರಲು ಯತ್ನಿಸಿಸುತ್ತಿದ್ದಾರೆ. ಆರು ಅಗ್ನಿಶಮಕ ವಾಹನಗಳು ಇದ್ದರೂ. ಇದುವರೆಗೂ ಬೆಂಕಿ ನಿಯಂತ್ರಣಕ್ಕೆ ಬಂದಿಲ್ಲ ಎಂದು ತಿಳಿದು ಬಂದಿದೆ. ಇದೇ ವೇಳೆ ಈ ಬೆಂಕಿಗೆ ಹೇಗೆ ಕಾಣಿಸಿಕೊಂಡಿದೆ ಎಂಬುದರ ಬಗ್ಗೆ ಇನ್ನೂ ತಿಳಿದುಬಂದಿಲ್ಲ. ಆದರೆ, ಶಾರ್ಟ್ ಸರ್ಕ್ಯೂಟ್ನಿಂದ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ನೌಕರರ ಮುಖಂಡ ವಿನೋದ್ ಸೂರಿ ಮಾತನಾಡಿ, ಸಾತ್ಪುರ ಕಟ್ಟಡದ ಮೂರನೇ ಮಹಡಿಯಲ್ಲಿ ಗಿರಿಜನ ಕಲ್ಯಾಣ ಇಲಾಖೆಯ ಕಚೇರಿ ಇದೆ. ಈ ವಿಭಾಗದ ನಿರ್ದೇಶಕರ ಕೋಣೆಯ ಸಮೀಪ ಬೆಂಕಿಯ ಮೊದಲ ಕಿಡಿ ಹೊತ್ತಿಕೊಂಡಿದೆ. ಆರಂಭದಲ್ಲಿ ಇಲಾಖೆಯ ನೌಕರರು ಬೆಂಕಿಯನ್ನು ನಿಯಂತ್ರಿಸಲು ಯತ್ನಿಸಿದರು. ಆದರೂ, ಅದು ಸಾಧ್ಯವಾಗಲಿಲ್ಲ. ಸ್ವಲ್ಪ ಹೊತ್ತಿನಲ್ಲಿಯೇ ಬೆಂಕಿ ತೀವ್ರ ಸ್ವರೂಪ ಪಡೆದುಕೊಂಡಿತು ಎಂದು ತಿಳಿಸಿದರು.
ಕಳೆದ ಮಾರ್ಚ್ನಲ್ಲಿ ಮಧ್ಯಪ್ರದೇಶದ ಇಂದೋರ್ ಜಿಲ್ಲೆಯಲ್ಲೂ ಭಾರಿ ಬೆಂಕಿ ಅವಘಡ ಉಂಟಾಗಿತ್ತು. ರೌ ಪೊಲೀಸ್ ಠಾಣೆ ವ್ಯಾಪ್ತಿಯ ಮುಂಬೈ ಬೈಪಾಸ್ನಲ್ಲಿರುವ ಹೋಟೆಲ್ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿ ಅವಘಡ ಸಂಭವಿಸಿದಾಗ ಹೋಟೆಲ್ನೊಳಗೆ ಹಲವರು ಮಲಗಿದ್ದರು ಮತ್ತು ಸಿಬ್ಬಂದಿ ಸಹ ಇದ್ದರು. ಬೆಂಕಿ ತಗುಲಿದ ವಿಷಯ ತಿಳಿದ ತಕ್ಷಣ ತಮ್ಮ ಪ್ರಾಣ ಉಳಿಸಿಕೊಳ್ಳಲು ಹೋಟೆಲ್ನಿಂದ ಹೊರಗೆ ಓಡಿ ಬಂದಿದ್ದರು. ದಟ್ಟ ಹೊಗೆಯಿಂದಾಗಿ ಕೆಲವರಿಗೆ ಉಸಿರುಗಟ್ಟುವಿಕೆ ಉಂಟಾಗಿ ನಾಲ್ವರನ್ನೂ ಆಸ್ಪತ್ರೆಗೂ ದಾಖಲಾದ ಘಟನೆ ನಡೆದಿತ್ತು.
ಅಲ್ಲದೇ, ಬೆಂಕಿ ಹೆಚ್ಚುತ್ತಿರುವುದನ್ನು ಕಂಡ ನೌಕರರು ತಮ್ಮ ಕೈಲಾದ ಸಾಮಗ್ರಿ ಹಾಗೂ ಕಡತಗಳನ್ನು ಹೊರತೆಗೆದು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಗಿರಿಜನ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಹಲವು ದಾಖಲೆಗಳು ಹಾಗೂ ಕಂಪ್ಯೂಟರ್ಗಳು ಬೆಂಕಿಗೆ ಆಹುತಿಯಾಗಿವೆ ಎಂದು ಹೇಳಲಾಗುತ್ತಿದೆ.