ಮುಂಬೈ: ಬಿಪರ್‌ಜೋಯ್ ಚಂಡಮಾರುತ ಅರಬ್ಬಿ ಸಮುದ್ರದ ಮೇಲೆ ಬೀಸುತ್ತಿದ್ದು, ಹವಾಮಾನ ವೈಪರೀತ್ಯದಿಂದಾಗಿ ನಿನ್ನೆ ಸಂಜೆ ಮುಂಬೈನಲ್ಲಿ ವಿಮಾನ ಕಾರ್ಯಾಚರಣೆಗೆ ತೊಂದರೆಯಾಗಿದೆ. ಬಿಪರ್‌ಜೋಯ್ ಚಂಡಮಾರುತದ ತೀವ್ರತೆಯು “ಅತ್ಯಂತ ತೀವ್ರವಾದ ಚಂಡಮಾರುತ” ವಾಗಿ ಪರಿವರ್ತನೆ ಗೊಂಡಿದ್ದು, ಮುಂಬೈನಲ್ಲಿ ಭಾರೀ ಮಳೆ ಮತ್ತು ಗಾಳಿಯು ರಭಸದಿಂದ ಅಪ್ಪಳಿಸಿದೆ.
ನೂರಾರು ಪ್ರಯಾಣಿಕರು ಗಂಟೆಗಟ್ಟಲೆ ತಮ್ಮ ವಿಮಾನಗಳಿಗಾಗಿ ಕಾಯುತ್ತಿದ್ದರಿಂದ ಮುಂಬೈ ವಿಮಾನ ನಿಲ್ದಾಣವು ಆತಂಕ ಮತ್ತು ಅವ್ಯವಸ್ಥೆಯ ದೃಶ್ಯಗಳಿಗೆ ಸಾಕ್ಷಿಯಾಯಿತು. ಹವಾಮಾನದ ಕಾರಣದಿಂದ ಹಲವಾರು ವಿಮಾನಗಳು ವಿಳಂಬಗೊಂಡು ಕೆಲವು ರದ್ದುಗೊಂಡವು. ಮತ್ತೆ ಕೆಲವು ಲ್ಯಾಂಡಿಗ್ ಅಡಚಣೆಯನ್ನು ಎದುರುಗೊಂಡವು.
ಮಹಾರಾಷ್ಟ್ರದ ಕರಾವಳಿಯ ಕೆಲವು ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ‘ಗುಡುಗು ಸಹಿತ’ ಭಾರೀ ಮಳೆಯ ಎಚ್ಚರಿಕೆಯನ್ನು ನೀಡಿದೆ. ಬಿಪರ್‌ಜಾಯ್ ಚಂಡಮಾರುತ ಗುರುವಾರ ಗುಜರಾತ್ ಮತ್ತು ಪಾಕಿಸ್ತಾನದ ಕರಾವಳಿಗೆ ಅಪ್ಪಳಿಸುವ ನಿರೀಕ್ಷೆಯಿದೆ. ಕಚ್, ಜಾಮ್‌ನಗರ, ಮೊರ್ಬಿ, ಗಿರ್ ಸೋಮನಾಥ್, ಪೋರಬಂದರ್ ಮತ್ತು ದೇವಭೂಮಿ ದ್ವಾರಕಾ ಜಿಲ್ಲೆಗಳಲ್ಲಿ ಜೂನ್ 13-15 ರ ಅವಧಿಯಲ್ಲಿ ಭಾರಿ ಮಳೆ ಮತ್ತು ಗಂಟೆಗೆ 150 ಕಿಮೀ ವೇಗದಲ್ಲಿ ಚಂಡಮಾರುತವು ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.