ಟೀಂ ಇಂಡಿಯಾ ವಿಕೆಟ್‌ಕೀಪರ್ ಹಾಗೂ ಬ್ಯಾಟರ್ ರಿಷಭ್ ಪಂತ್ ಶನಿವಾರ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ ತಂಡಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ.ಡಬ್ಲ್ಯುಟಿಸಿ ಫೈನಲ್‌ನಲ್ಲಿ ಭಾರತ ತಂಡಕ್ಕೆ ವಿಕೆಟ್‌ಕೀಪರ್ ಹಾಗೂ ಬ್ಯಾಟರ್ ರಿಷಭ್ ಪಂತ್ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್ 30 ರಂದು ನಡೆದ ಭೀಕರ ಕಾರು ಅಪಘಾತದಲ್ಲಿ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದ ಪಂತ್. ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ.
ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು ಕೂಡ ರಿಷಭ್ ಪಂತ್ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ನಿನ್ನೆಯ ಪಂದ್ಯದಲ್ಲಿ ವಿಕೆಟ್‌ಕೀಪರ್, ಬ್ಯಾಟರ್ ಕೆ.ಎಸ್. ಭರತ್ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 5 ರನ್ ಗಳಿಸಿ ಔಟಾದ ಬಳಿಕ ಪಂತ್ ಅವರನ್ನು ಫ್ಯಾನ್ಸ್ ಜ್ಞಾಪಿಸಿಕೊಂಡಿದ್ದಾರೆ.
ಭಾರತ್ ಆರ್ಮಿ ಎಂಬ ಹೆಸರಿನ ಟ್ವಿಟರ್ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಲಂಡನ್‌ನ ಓವಲ್‌ನ ಅಭಿಮಾನಿಯೊಬ್ಬರು ರಿಷಭ್ ಪಂತ್ ಅನುಪಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ.
“ಆತ್ಮೀಯ ರಿಷಭ್ ಪಂತ್, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ನಾವು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಸ್ಪಲ್ಪ ಗಲ್ಲವನ್ನು ಮೇಲಕ್ಕೆತ್ತಿ ನೋಡಿ, ಪ್ರಪಂಚಾದ್ಯಂತ ಶತಕೋಟಿ ಭಾರತೀಯರು ನೀವು ಶೀಘ್ರವಾಗಿ ಚೇತರಿಸಿಕೊಳ್ಳಲೆಂದು ಪ್ರಾರ್ಥಿಸುತ್ತಿದ್ದಾರೆ” ಎಂದು ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪಂತ್, “ನಂಬಿಕೆ ಇಟ್ಟುಕೊಳ್ಳಿ” ಎಂದು ತಿಳಿಸಿದ್ದಾರೆ.ಈ ಹಿಂದೆ ಟೀಂ ಇಂಡಿಯಾ ಕ್ರಿಕೆಟರ್ ರಿಷಭ್ ಪಂತ್ ತಾವು ಐಪಿಎಲ್‌ನಲ್ಲಿ ಪ್ರತಿನಿಧಿಸುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಬೆಂಬಲ ನೀಡಲು ಅರುಣ್ ಜೇಟ್ಲಿ ಸ್ಟೇಡಿಯಂಗೆ ಆಗಮಿಸಿ ಗಮನ ಸೆಳೆದಿದ್ದರು. ತವರಿನಲ್ಲಿ ನಡೆಯುತ್ತಿರುವ ಪಂದ್ಯವನ್ನು ಕ್ರೀಡಾಂಗಣಕ್ಕೆ ಬಂದು ವೀಕ್ಷಿಸಿದ ಮಾಜಿ ನಾಯಕನನ್ನು ಅಭಿಮಾನಿಗಳು ಕಣ್ತುಂಬಿಕೊಂಡಿದ್ದರು. ಈ ವೇಳೆ ಪಂತ್ ಬಿಳಿ ಟಿ ಶರ್ಟ್ ಧರಿಸಿ ಪಂದ್ಯ ಎಂಜಾಯ್ ಮಾಡುತ್ತಿರುವ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು 444 ರನ್ಗಳ ಸವಾಲಿನ ಗುರಿಯನ್ನು ಭಾರತಕ್ಕೆ ನೀಡಿದೆ. ಓವಲ್‌ನಲ್ಲಿ ಶನಿವಾರ ನಡೆದ ನಾಲ್ಕನೇ ದಿನದಾಟದಲ್ಲಿ ಶುಭ್‌ಮನ್ ಗಿಲ್ ಹಾಗು ರೋಹಿತ್ ಶರ್ಮಾ ಬೇಗ ಔಟಾಗಿ ನಿರಾಶೆ ಮೂಡಿಸಿದರು. ಇದೀಗ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಕ್ರೀಸ್‌ನಲ್ಲಿದ್ದಾರೆ. ಭಾರತದ ಗೆಲುವಿಗೆ 280 ರನ್‌ಗಳು ಬೇಕಿವೆ.
ಒಂದು ವೇಳೆ ತಂಡ ಗೆದ್ದಿದ್ದೇ ಆದಲ್ಲಿ ರೋಹಿತ್ ಟೀಂ ವಿಶ್ವ ಟೆಸ್ಟ್ ಚಾಂಪಿಯನ್ ಆಗುವುದರ ಹೊರತಾಗಿ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್ ಚೇಸ್ ಮಾಡಿ ಗೆದ್ದ ವಿನೂತನ ದಾಖಲೆಯನ್ನೂ ಬರೆಯಲಿದೆ. ಹಾಗಾಗಿ ಇವತ್ತಿನ ಪಂದ್ಯದ ಮೇಲೆ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ದೃಷ್ಟಿ ನೆಟ್ಟಿದ್ದಾರೆ.