ಕೊಲಂಬಿಯಾ: ಇಲ್ಲಿನ ಅಮೆಜಾನ್ ಕಾಡಿನಲ್ಲಿ ವಿಮಾನ ಪತನಗೊಂಡ 40 ದಿನಗಳ ನಂತರ ನಾಲ್ಕು ಮಕ್ಕಳು ಜೀವಂತವಾಗಿ ಪತ್ತೆಯಾಗಿದ್ದಾರೆ ಎಂದು ಅಲ್ಲಿನ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಹೇಳಿದ್ದಾರೆ.
ಮೇ 1 ರಂದು ವಿಮಾನ ಪತನಗೊಂಡಾಗ 13, 9, 4 ಮತ್ತು 1 ವರ್ಷ ವಯಸ್ಸಿನ ಒಡಹುಟ್ಟಿದ ನಾಲ್ಕು ಮಕ್ಕಳು ತಮ್ಮ ತಾಯಿ, ಪೈಲಟ್ ಮತ್ತು ಸಹ ಪೈಲಟ್‌ನೊಂದಿಗೆ ವಿಮಾನದಲ್ಲಿದ್ದರು. ಅವರ ತಾಯಿ ಮತ್ತು ವಿಮಾನದಲ್ಲಿದ್ದ ಪೈಲಟ್ ಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಹಲವು ವಾರಗಳ ಹುಡುಕಾಟದ ನಂತರ ಮಕ್ಕಳನ್ನು ಕಂಡುಹಿಡಿದಿರುವುದು ಇಡೀ ದೇಶಕ್ಕೆ ಸಂತೋಷ ತಂದಿದೆ ಎಂದು ಅಧ್ಯಕ್ಷ ಗುಸ್ಟಾವೊ ಪೆಟ್ರೋ ಹೇಳಿದ್ದಾರೆ.
ಅವರು ಇದನ್ನು “ಮಾಂತ್ರಿಕ ದಿನ” ಎಂದು ಕರೆದಿದ್ದು, ಮಕ್ಕಳು ಒಬ್ಬಂಟಿಯಾಗಿದ್ದರು, ಅವರು ತಾವಾಗೇ ಬದುಕುಳಿಯುವ ಉದಾಹರಣೆಯನ್ನು ಸಾಧಿಸಿದ್ದು, ಇದು ಇತಿಹಾಸದಲ್ಲಿ ದಾಖಲಾಗಲಿದೆ ಎಂದು ಅವರು ಹೇಳಿದ್ದಾರೆ.
ಸೆಸ್ನಾ 206 ವಿಮಾನವು ಅಮೆಜಾನಾಸ್ ಪ್ರಾಂತ್ಯದ ಅರರಾಕುವಾರಾದಿಂದ ಸ್ಯಾನ್ ಜೋಸ್ ಡೆಲ್ ಗುವಿಯಾರ್‌ಗೆ ಹಾರುತ್ತಿದ್ದಾಗ, ಇಂಜಿನ್ ವೈಫಲ್ಯದಿಂದಾಗಿ ಕಾಡಿನ ಮಧ್ಯ ಪತನಗೊಂಡಿದೆ. ಮೂವರು ವಯಸ್ಕರ ಮೃತದೇಹಗಳು ಅಪಘಾತದ ಸ್ಥಳದಲ್ಲಿ ಸೇನೆಗೆ ಪತ್ತೆಯಾಗಿವೆ.
ನಿರ್ಜಲೀಕರಣ್ ಅಹಾಗೂ ಕೀಟಗಳ ಕಡಿತದಿಂದ ಬಳಲಿದ್ದ ಮಕ್ಕಳನ್ನು ಕೊಲಂಬಿಯಾದ ರಾಜಧಾನಿ ಬೊಗೋಟಾಕ್ಕೆ ರವಾನಿಸಲಾಗಿದೆ. ಮಕ್ಕಳು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಅವರು ತಮ್ಮ ಅಜ್ಜನೊಂದಿಗೆ ಮಾತನಾಡಿದ್ದಾರೆ. ವನದೇವತೆ ಅವರನ್ನು ಹಿಂದಿರುಗಿಸಿದ್ದಾರೆ ಎಂದು ಅಜ್ಜ ಹೇಳಿದ್ದಾರೆ.