ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪ ಸಂಬಂಧ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ತಮ್ಮ ವಿರುದ್ಧದ ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠವು ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿ ವಿಚಾರಣೆ ಮುಂದೂಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು, ”ಅರ್ಜಿದಾರರ ವಿರುದ್ಧದ ಐಪಿಸಿ ಸೆಕ್ಷನ್ 153 ಎ ಅಡಿ ಕೇಸ್ ದಾಖಲು ಮಾಡಲು ಈ ಪ್ರಕರಣವು ಯೋಗ್ಯವಾಗಿಲ್ಲ. ಈ ಕಾರಣ ಹರೀಶ್ ಪೂಂಜಾ ವಿರುದ್ಧ ವಿಳಂಬವಾಗಿ ದೂರು ದಾಖಲು ಮಾಡಲಾಗಿದೆ. ಪೂಂಜಾ ಹೇಳಿಕೆ ನೀಡಿದ ಬಳಿಕ ಯಾವುದೇ ಶಾಂತಿ ಭಂಗದ ಕೃತ್ಯಗಳು ನಡೆದಿಲ್ಲ. ಈ ಹೇಳಿಕೆಯು ಪ್ರಚೋದನೆ ಸಷ್ಟಿಸಿಲ್ಲ” ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಈ ಅಂಶವನ್ನು ಪುರಸ್ಕರಿಸಿದ ನ್ಯಾಯಪೀಠವು ಪ್ರಕರಣಕ್ಕೆ ವಿಚಾರಣೆ ತಡೆ ನೀಡಿ ಆದೇಶ ಹೊರಡಿಸಿದೆ.