ದಿವಾಳಿ ಪಾಕಿಸ್ತಾನಕ್ಕೆ ನೆರೆಹೊರೆ ಕಿರಿಕಿರಿ: ಅಫಘಾನಿಸ್ಥಾನದಿಂದ ನುಸುಳುಕೋರ ಬಾಧೆ; ವಿದ್ಯುತ್ ಬಿಲ್ ಬಾಕಿ ಪಾವತಿಗೆ ದುಂಬಾಲು ಬಿದ್ದ ಚೀನಾ

ಇಸ್ಲಾಮಾಬಾದ್: ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬಂಧನದ ನಂತರ ಮೇ 9 ರಂದು ದೇಶವನ್ನು ಬೆಚ್ಚಿಬೀಳಿಸಿದ ಭಾರೀ ಹಿಂಸಾಚಾರದ ಹಿನ್ನೆಲೆಯಲ್ಲಿ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಅಕ್ರಮವಾಗಿ ತಂಗಿರುವ ಆಫ್ಘನ್ ಪ್ರಜೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಪಾಕಿಸ್ತಾನದ ಆಂತರಿಕ ಸಚಿವಾಲಯ ನಿರ್ಧರಿಸಿದೆ. ಪಾಕ್ ನ ವಿದೇಶಿ ಕಾಯಿದೆಯಡಿಯಲ್ಲಿ ಈಗ ವಿಚಾರಣೆಗೆ ಒಳಪಟ್ಟಿರುವ 200 ಕ್ಕೂ ಹೆಚ್ಚು ಆಫ್ಘನ್ನರನ್ನು ಪೊಲೀಸರು ಬಂಧಿಸಿದ್ದಾರೆ. ದೇಶದ ಆಂತರಿಕ ಸಚಿವಾಲಯವು ಇಸ್ಲಾಮಾಬಾದ್‌ನಲ್ಲಿರುವ ಎಲ್ಲಾ ಆಫ್ಘನ್ ವಸಾಹತುಗಳ ಲೆಕ್ಕಪರಿಶೋಧನೆಯನ್ನು ಬಯಸುತ್ತಿದೆ ಎನ್ನಲಾಗಿದ್ದು ಇದು ನೆರೆಯ ಅಪ್ಘನ್ ದೇಶದ ಕೆಂಗಣ್ಣಿಗೆ ಗುರಿಯಾಗಿದೆ.

ಮೇ 9 ರ ಗಲಭೆಯಲ್ಲಿ ಆಫ್ಘನ್ ಪ್ರಜೆಗಳು ಭಾಗಿಯಾಗಿದ್ದಾರೆ ಎಂದು ಪಾಕಿಸ್ತಾನಿ ಅಧಿಕಾರಿಗಳು ನಂಬಿದ್ದು,  ಪಾಕಿಸ್ತಾನಿ ಸೇನೆಯ ಆಸ್ತಿಗಳಿಗೆ ಹಾನಿ ಮಾಡಲಾಗಿದೆ, ರಾಜಧಾನಿಯಲ್ಲಿನ ಅಪರಾಧ ಪ್ರಮಾಣವನ್ನು ನಿಗ್ರಹಿಸಲು ಆಫ್ಘನ್ನರನ್ನು ದಮನ ಮಾಡಲಾಗುತ್ತಿದೆ ಎಂದು ಪಾಕ್ ಸೇನೆ ಹೇಳಿದೆ. ಆದರೆ ಪಾಕ್ ಸೇನೆಯು ಸರಿಯಾದ ಪಾಸ್ ಪೋರ್ಟ್ ಹೊಂದಿರುವ ತನ್ನ ನಾಗರಿಕರನ್ನು ಬಂಧಿಸಿ ದಮನ ಮಾಡುತ್ತಿದೆ ಎಂದು ಅಫಘಾನಿಸ್ಥಾನದ ತಾಲಿಬಾನ್ ಸರ್ಕಾರ ದೂರಿದೆ. ಇದೀಗ ಈ ಎರಡೂ ದೇಶಗಳು ಪರಸ್ಪರ ಕಿತ್ತಾಟದಲ್ಲಿ ತೊಡಗಿರುವ ವರದಿಗಳಾಗಿವೆ.

ಅಮೇರಿಕಾ ಮತ್ತು ನ್ಯಾಟೋ ಪಡೆಗಳು ಅಫಘಾನಿಸ್ಥಾನವನ್ನು ತೊರೆದ ಹಿನ್ನೆಲೆಯಲ್ಲಿ ಅಧ್ಯಕ್ಷ ಅಶ್ರಫ್ ಘನಿಯಿಂದ ತಾಲಿಬಾನ್ ಅಧಿಕಾರ ವಹಿಸಿಕೊಂಡ ನಂತರ ಜನರು ಅಲ್ಲಿಂದ ಕಾಲ್ಕಿತ್ತು ಪಾಕಿಸ್ತಾನಕ್ಕೆ ಬಂದು ನೆಲೆಸಿದ್ದಾರೆ. UNHCR ಅಂದಾಜಿನ ಪ್ರಕಾರ ಆಗಸ್ಟ್ 2021 ರಲ್ಲಿ ತಾಲಿಬಾನ್‌ಗೆ ಹೆದರಿ 600,000 ಕ್ಕೂ ಹೆಚ್ಚು ಆಫ್ಘನ್ನರು ಪಾಕಿಸ್ತಾನಕ್ಕೆ ಓಡಿಹೋಗಿ, ಪಾಕ್ ನಲ್ಲಿ ಆಫ್ಘನ್ ನಿರಾಶ್ರಿತರ ಸಂಖ್ಯೆಯನ್ನು 3.7 ಮಿಲಿಯನ್‌ಗೆ ಏರಿಸಿದ್ದಾರೆ. ಆದಾಗ್ಯೂ, ಹೆಚ್ಚಿನ ನಿರಾಶ್ರಿತರು UNHCR ನಲ್ಲಿ ನೋಂದಾಯಿಸಲ್ಪಟ್ಟಿಲ್ಲ ಎನ್ನಲಾಗಿದೆ.

ಚೀನಾ ಕಂಪನಿಗಳ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಪಾಕ್

ಕನಿಷ್ಠ ಎರಡು ಚೀನಾದ ವಿದ್ಯುತ್ ಕಂಪನಿಗಳು ಪಾಕಿಸ್ತಾನದ ಸೆಂಟ್ರಲ್ ಪವರ್ ಪರ್ಚೇಸಿಂಗ್ ಏಜೆನ್ಸಿಗೆ (ಸಿಪಿಪಿಎ) ಬಿಲಿಯನ್‌ಗಟ್ಟಲೆ ಡಾಲರ್ ಬಾಕಿಯ ಮೇಲೆ ಸುಸ್ತಿದಾರ ನೋಟಿಸ್ ನೀಡಿವೆ. ಕೋಟ್ಯಂತರ ರೂಪಾಯಿ ಬಾಕಿ ಪಾವತಿಸದೆ ಇಸ್ಲಾಮಾಬಾದ್‌ ಸುಸ್ತಿದಾರರಾಗಿದ್ದಾರೆ ಎಂದು ಚೀನಾದ ಸ್ವತಂತ್ರ ವಿದ್ಯುತ್ ಉತ್ಪಾದಕರು ಹೇಳಿದ್ದಾರೆ.

ಚೀನಾದ ಸಿನೊಹೈಡ್ರೋ ರಿಸೋರ್ಸಸ್ ಲಿಮಿಟೆಡ್ ಮತ್ತು ಕತಾರ್‌ನ ಅಲ್ ಮಿರ್ಕಾಬ್ ಕ್ಯಾಪಿಟಲ್ ಲಿಮಿಟೆಡ್ ಒಡೆತನದ ಪೋರ್ಟ್ ಖಾಸಿಮ್ ಎಲೆಕ್ಟ್ರಿಕ್ ಪವರ್ ಕಂಪನಿ ಲಿಮಿಟೆಡ್ ಪಾಕ್ ತನಗೆ ವಿದ್ಯುತ್‌ಗಾಗಿ 77.3 ಶತಕೋಟಿ ಡಾಲರ್ ಪಾವತಿಸದ ಬಾಕಿಯನ್ನು ಹೊಂದಿದೆ ಎಂದು ಹೇಳಿಕೊಂಡಿದೆ. 73.6 ದಶ ಲಕ್ಷ ಡಾಲರ್ ನ ಮೂಲ ಪಾವತಿಗೆ ಮೇ 31 ರ ಗಡುವು ಮುಗಿದಿದೆ ಎಂದು ಕಂಪನಿ ಹೇಳಿದ್ದು. ಪಾಕಿಸ್ತಾನ ಸರ್ಕಾರವು ಬಾಕಿ ಪಾವತಿಸದೆ ಸುಸ್ತಿದಾರನಾಗಿದೆ ಎಂದು ಕಂಪನಿ ಹೇಳಿದೆ. ಅದೇ ರೀತಿ, ಎಂಗ್ರೋ ಪವರ್‌ಜೆನ್ ಥಾರ್ ಲಿಮಿಟೆಡ್ ಹೇಳುವಂತೆ ಸಿಪಿಪಿಎ ತನ್ನಿಂದ ಖರೀದಿಸಿದ ವಿದ್ಯುತ್‌ಗೆ 65.50 ಶತಕೋಟಿ ರೂ. ಬಾಕಿ ಉಳಿಸಿಕೊಂಡಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ಪಾಕ್-ಚೀನಾ ನಡುವಿನ ರಾಜತಾಂತ್ರಿಕ ಸಂಬಂಧವನ್ನು ಎಲ್ಲಾ ಹವಾಮಾನದ ಸ್ನೇಹ ಎಂದು ಪರಿಗಣಿಸಿದ್ದರೂ, ಸಿಪೆಕ್ ವಿದ್ಯುತ್ ಯೋಜನೆಗಳಿಂದಾಗಿ ಪಾಕಿಸ್ತಾನ ಮತ್ತು ಚೀನಾ ಪರಸ್ಪರ ಕಿತ್ತಾಡುವಂತಾಗಿದೆ. ಈ ವರ್ಷದ ಮಾರ್ಚ್‌ನಲ್ಲಿ, ಇಸ್ಲಾಮಾಬಾದ್‌ನಲ್ಲಿರುವ ಚೀನಾದ ರಾಯಭಾರ ಕಚೇರಿಯು ಚೀನಾದ ವಿದ್ಯುತ್ ಸ್ಥಾವರಗಳಿಗೆ 1.5 ಶತಕೋಟಿ ಡಾಲರ್ ಮಿತಿಮೀರಿದ ಪಾವತಿಗಳನ್ನು ಬಿಡುಗಡೆ ಮಾಡುವಂತೆ ಪಾಕಿಸ್ತಾನವನ್ನು ಕೇಳಿದೆ. ಚೀನಾದ ಕಂಪನಿಗಳಿಗೆ ವಿದೇಶಿ ವಿನಿಮಯದಲ್ಲಿ ಪಾವತಿಸಲು ವಿದೇಶಿ ವಿನಿಮಯದ ಅವಶ್ಯಕತೆಗಳನ್ನು ಸಡಿಲಗೊಳಿಸುವಂತೆ ಅದು ಪಾಕಿಸ್ತಾನದ ಸರ್ಕಾರವನ್ನು ಕೇಳಿದೆ.

64 ಶತಕೋಟಿ ಡಾಲರ್ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಕಾರಣದಿಂದಾಗಿ ಡಜನ್ ಗಟ್ಟಲೆ ಚೀನೀ ಕಂಪನಿಗಳಿಂದ ಪಾಕಿಸ್ತಾನವು ಬೇಡಿಕೆಗಳನ್ನು ಎದುರಿಸುತ್ತಿರುವುದು ಇದೇ ಮೊದಲಲ್ಲ. ಇಸ್ಲಾಮಾಬಾದ್ ಅನೇಕ ಬಾರಿ ಚೀನೀ ಕಂಪನಿಗಳಿಂದ ಬ್ಲ್ಯಾಕ್‌ಮೇಲ್, ಬೆದರಿಕೆಗಳು, ಕೆಲಸ ನಿಲ್ಲಿಸುವ ಬೆದರಿಕೆಗಳನ್ನು ಎದುರಿಸುತ್ತಿದೆ.

ಅತ್ತ ದೇಶದಲ್ಲಿ ಜನರೂ ಕೂಡಾ ಸೇನೆ ವಿರುದ್ದ ತಿರುಗಿಬಿದ್ದಿದ್ದು ಅಂತರ್ ಕಲಹ ನಡೆಯುತ್ತಿದೆ. ದಿವಾಳಿ ಪಾಕಿಸ್ತಾನ ವಿಶ್ವದ ಮುಂದೆ ಆರ್ಥಿಕ ಸಹಾಯಕ್ಕಾಗಿ ಕೈಯೊಡ್ಡಿ ನಿಂತಿದ್ದರೂ ಯಾರೊಬ್ಬರೂ ಪಾಕಿಸ್ತಾನಕ್ಕೆ ಸಹಾಯ ಮಾಡಲು ಮುಂದೆ ಬರುತ್ತಿಲ್ಲ.