ಗೃಹಪ್ರವೇಶವಾದ ಐದೇ ದಿನಕ್ಕೆ ಮನೆ ಮಾಲಕಿ ಆತ್ಮಹತ್ಯೆ ಪ್ರಕರಣ: ಬ್ಯಾಂಕ್ ನಲ್ಲಿ ಬಾಕಿ ಇಟ್ಟಿದ್ದ ಸಾಲ ಸಾವಿಗೆ ಕಾರಣ?

ಉಳ್ಳಾಲ: ಕುಂಪಲದ ಚಿತ್ರಾಂಜಲಿ ನಗರದಲ್ಲಿ ಮನೆ ಖರೀದಿಸಿ ಗೃಹಪ್ರವೇಶವಾದ ಐದನೇ ದಿನಕ್ಕೆ ಅದೇ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಅಶ್ವಿನಿ ಬಂಗೇರ(25) ಸಾವಿಗೆ ಸ್ನೇಹಿತೆ ಬ್ಯಾಂಕ್ ನಲ್ಲಿ ಬಾಕಿ ಇಟ್ಟಿದ್ದ ಸಾಲವೆ ಕಾರಣ ಎನ್ನಲಾಗಿದೆ.

ಮೂಲತಃ ಫರಂಗಿಪೇಟೆಯವರಾದ ಅಶ್ವಿನಿ ಕುಂಪಲದಲ್ಲಿ ತಾನು ಹೊಸದಾಗಿ ಕೊಂಡ ಮನೆಯ ಗೃಹ ಪ್ರವೇಶವನ್ನು ಅದ್ದೂರಿಯಾಗಿ ನಡೆಸಿ ತನ್ನ ತಾಯಿ ದೇವಕಿ ಹಾಗೂ ದೊಡ್ಡಮ್ಮನ ಇಬ್ಬರು ಗಂಡು ಮಕ್ಕಳೊಂದಿಗೆ ನೆಲೆಸಿದ್ದರು. ಆದರೆ ವಿಧಿ ಅದೇ ಮನೆಯಲ್ಲಿ ಆಕೆಯ ಸಾವಿಗೆ ಮುನ್ನುಡಿ ಬರೆದಿತ್ತು ಎನ್ನುವ ವಿಚಾರ ಮಾತ್ರ ಯಾರಿಗೂ ಗೊತ್ತಿರಲಿಲ್ಲ.

ವಿದೇಶದಲ್ಲಿ ಉದ್ಯೋಗಿಯಾಗಿದ್ದ ಅಶ್ವಿನಿ ಕೆಲದಿನಗಳ ಹಿಂದೆ ಊರಿಗೆ ಬಂದಿದ್ದು, ಗೆಳತಿ ಎನ್ನಲಾದ ಸಂಗೀತಾ ಎಂಬ ಮಹಿಳೆಯ ಸಲಹೆಯಂತೆ ಕುಂಪಲ ಚಿತ್ರಾಂಜಲಿನಗರದಲ್ಲಿರುವ ಮನೆಯನ್ನು ಖರೀದಿಸಿದ್ದರು. ಮನೆಗೆ ಬ್ಯಾಂಕ್ ಸಾಲವಿದ್ದು, ಈ ಸಾಲ ಮರುಪಾವತಿಯಾದ ತಕ್ಷಣ ಅಶ್ವಿನಿ ಹೆಸರಿಗೆ ಹೊಸ ಮನೆಯನ್ನು ನೋಂದಾವಣಿ ಮಾಡುವ ಬಗ್ಗೆ ಒಪ್ಪಂದ ನಡೆದಿತ್ತು.

ಮನೆಗಾಗಿ ಸಂಗೀತಾ ಬ್ಯಾಂಕಿನಿಂದ ತೆಗೆದುಕೊಂಡ 18 ಲಕ್ಷ ರೂ ಸಾಲ ಮರುಪಾವತಿ ಬಾಕಿಯಿತ್ತು. ಅಶ್ವಿನಿಗೆ ಮನೆ ನೀಡುವುದಕ್ಕೆ ಮುಂಚಿತವಾಗಿ 7 ಲಕ್ಷ ರೂ. ನಗದು ಪಡೆದು, ನಂತರ 8 ತಿಂಗಳ ಕಾಲ ರೂ.17,000 ಇಎಂಐ ಆಕೆಯ ಬಳಿ ಪಾವತಿಸಿದ್ದರು ಎನ್ನಲಾಗಿದೆ.

ಜೂ. 3 ರಂದು ಚಿತ್ರಾಂಜಲಿ ನಗರದಲ್ಲಿ ಸಂಬಂಧಿಕರ, ಗೆಳೆಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ಗೃಹಪ್ರವೇಶ ನಡೆದಿತ್ತು. ಆದರೆ ಹೊಸ‌ ಮನೆಯ ಗೃಹ ಪ್ರವೇಶದ ದಿನದಂದು ಸಾಲ ನೀಡಿದ್ದ ಬ್ಯಾಂಕಿನ ಸಿಬ್ಬಂದಿಗಳು ಮನೆಗೆ ಆಗಮಿಸಿದ್ದು, ಮನೆಮಂದಿ ಲೋನ್ ಪಾವತಿಸದೆ ಇದ್ದಲ್ಲಿ ಮನೆಯನ್ನು ಹರಾಜು ಹಾಕುವುದಾಗಿ ಬೆದರಿಸಿದ್ದಾರೆ ಎನ್ನಲಾಗಿದೆ.

ಕಳೆದ 1 ವರ್ಷದಿಂದ ಇಎಂಐ ಪಾವತಿಸದೆ ಇರುವುದನ್ನು ಬ್ಯಾಂಕ್ ಸಿಬ್ಬಂದಿಗಳು ಹೇಳಿದ್ದಾರೆ ಮತ್ತು ಜೂನ್ 8 ರಂದು ಶಾಖೆಗೆ ಭೇಟಿ ನೀಡುವಂತೆ ತಿಳಿಸಿದ್ದಾರೆ. ಎಲ್ಲರ ಮುಂದೆ ಈ ರೀತಿ ಅವಮಾನಿತಳಾದ ಅಶ್ವಿನಿ ಇದರಿಂದ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಅವಮಾನ ತಾಳಲಾರದೆ ಖಿನ್ನತೆಗೆ ಜಾರಿ ಅಶ್ವಿನಿ ಡೆತ್ ನೋಟ್ ಬರೆದಿಟ್ಟು ಫ್ಯಾನಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ‌ ಎನ್ನಲಾಗಿದೆ. ಡೆತ್ ನೋಟಲ್ಲಿ ತಾನು ಮನೆ ಖರೀದಿಸಿ ಮೋಸ ಹೋಗಿದ್ದು ಬ್ಯಾಂಕ್ ಅಧಿಕಾರಿಗಳು ಬಂದು ಪೀಡಿಸುತ್ತಿರುವ ಬಗ್ಗೆ ಉಲ್ಲೇಖಿಸಲಾಗಿದೆ ಎಂದು ವರದಿಯಾಗಿದೆ. ಕುಟುಂಬದ ಏಕೈಕ ಆಧಾರವಾಗಿದ್ದ ಮನೆಮಗಳಿಲ್ಲದೆ ಆಕೆಯ ತಾಯಿ ಕಣ್ಣೀರಿಟ್ಟು ಗೋಳಾಡುತ್ತಿದ್ದಾರೆ.

ಉಳ್ಳಾಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.