ನವದೆಹಲಿ: ಬರೋಬ್ಬರಿ 27 ವರ್ಷಗಳ ಬಳಿಕ 71ನೇ ವಿಶ್ವ ಸುಂದರಿ ಸ್ಪರ್ಧೆಯು ಭಾರತದಲ್ಲಿ ನಡೆಯಲಿದ್ದು, ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2022 ವಿಜೇತೆ ಸಿನಿಶೆಟ್ಟಿ ಆತಿಥೇಯ ಪ್ರತಿನಿಧಿಯಾಗಿದ್ದು ಈ ಬಗ್ಗೆ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ. ಈ ಘಳಿಗೆಗೋಸ್ಕರ ತುಂಬಾ ಸಮಯದಿಂದ ಕಾಯುತ್ತಿದ್ದೆ, ನಾನು ಆತಿಥೇಯ ಪ್ರತಿನಿಧಿಯಾಗಿದ್ದು ಜಗತ್ತಿನ ಎಲ್ಲಾ ದೇಶಗಳನ್ನು ಭಾರತಕ್ಕೆ ಸ್ವಾಗತಿಸಲು, ಭಾರತದ ಸಂಸ್ಕೃತಿ, ಆಚಾರ ವಿಚಾರ ಹಾಗೂ ಆಹಾರದ ಪರಿಚಯವನ್ನು ಜಗತ್ತಿಗೆ ಪರಿಚಯಿಸಲು ತುಂಬಾ ಉತ್ಸುಕಳಾಗಿದ್ದೇನೆ ಎಂದು ಸುದ್ದಿಸಂಸ್ಥೆ ಎ.ಎನ್.ಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
22 ವರ್ಷ ವಯಸ್ಸಿನ ಸಿನಿ ಶೆಟ್ಟಿ ಮುಂಬೈನಲ್ಲಿ ಜನಿಸಿದ್ದರೂ, ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು. ಸಿನಿಶೆಟ್ಟಿ ತಂದೆ-ತಾಯಿ ಉಡುಪಿ ಬೆಳ್ಳಂಪಳ್ಳಿ ಮೂಲದವರಾಗಿದ್ದು, ಅಜ್ಜಿ ಪುತ್ತೂರಿನಲ್ಲಿ ನೆಲೆಸಿದ್ದಾರೆ.