ಆಗಸ್ಟ್ 1 ರಂದು ಗೃಹ ಜ್ಯೋತಿ; ಆಗಸ್ಟ್ 17 ರಂದು ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ

ಬೆಂಗಳೂರು: ಬಹುನಿರೀಕ್ಷಿತ ಕಾಂಗ್ರೆಸ್ ಗ್ಯಾರಂಟಿಯ ಐದು ಯೋಜನೆಗಳ ಅಧಿಕೃತ ಜಾರಿಗೆ ಕ್ಷಣಗಣನೆ ನಡೆಯುತ್ತಿದ್ದು, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಸ್ಟ್ 1 ರಂದು ‘ಗೃಹ ಜ್ಯೋತಿ’ ಉಚಿತ ವಿದ್ಯುತ್ ಯೋಜನೆಗೆ ಚಾಲನೆ ನೀಡಿದರೆ, ಆಗಸ್ಟ್ 17 ಅಥವಾ 18 ರಂದು ಕುಟುಂಬದ ಮುಖ್ಯಸ್ಥರೆಂದು ಗುರುತಿಸಲ್ಪಟ್ಟ ಮಹಿಳೆಯರಿಗೆ ಮಾಸಿಕ 2,000 ರೂ.ಗಳ ಸಹಾಯವನ್ನು ನೀಡುವ ‘ಗೃಹ ಲಕ್ಷ್ಮಿ’ ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು.

ಕಾಂಗ್ರೆಸ್‌ನ ಐದು ಚುನಾವಣಾ ಗ್ಯಾರಂಟಿಗಳ ಭಾಗವಾಗಿರುವ ಎರಡೂ ಯೋಜನೆಗಳ ಅನುಷ್ಠಾನದ ಕುರಿತು ಚರ್ಚಿಸಲು ಮುಖ್ಯಮಂತ್ರಿಗಳು ಹಿರಿಯ ಸರ್ಕಾರಿ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ ನಂತರ ಈ ಘೋಷಣೆ ಹೊರಬಿದ್ದಿದೆ. ಆಗಸ್ಟ್ 1 ರಂದು ಕಲಬುರ್ಗಿಯಲ್ಲಿ ‘ಗೃಹ ಜ್ಯೋತಿ’ ಯೋಜನೆಯನ್ನು ಪ್ರಾರಂಭಿಸಲು ಸರ್ಕಾರ ಯೋಜಿಸುತ್ತಿದೆ, ಆಗಸ್ಟ್ 17 ಅಥವಾ 18 ರಂದು ಬೆಳಗಾವಿಯಲ್ಲಿ ‘ಗೃಹ ಲಕ್ಷ್ಮಿ’ ಯೋಜನೆಯನ್ನು ಪ್ರಾರಂಭಿಸಲು ಚರ್ಚೆ ನಡೆಸಲಾಗಿದೆ.

ಎಲ್ಲಾ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸರಳಗೊಳಿಸುವಂತೆ ಮತ್ತು ಅನಗತ್ಯ ಮಾಹಿತಿ ಮತ್ತು ದಾಖಲೆಗಳನ್ನು ಕೇಳುವುದನ್ನು ತಪ್ಪಿಸಿ ಎಂದು ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ, ಅರ್ಜಿ ತಿರಸ್ಕೃತಗೊಂಡರೆ ಸೂಕ್ತ ಕಾರಣ ನೀಡಬೇಕು ಎಂದ ಅವರು, ಕ್ಷುಲ್ಲಕ ಕಾರಣ ನೀಡಿ ತಿರಸ್ಕರಿಸದಂತೆ ತಾಕೀತು ಮಾಡಿದರು.

ಎಲ್ಲಾ ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಸಂಖ್ಯೆಯ ಅರ್ಜಿಗಳು ಸಲ್ಲಿಕೆಯಾಗುವ ನಿರೀಕ್ಷೆಯಿದ್ದು, ಸಲ್ಲಿಸಿದ ಬೃಹತ್ ಪ್ರಮಾಣದ ಡೇಟಾಗೆ ಅನುಗುಣವಾಗಿ ಸೇವಾ ಸಿಂಧು ಪೋರ್ಟಲ್‌ನ ಸಾಮರ್ಥ್ಯವನ್ನು ಹೆಚ್ಚಿಸುವಂತೆ ಇ-ಆಡಳಿತ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

ಸೇವಾ ಸಿಂಧು ಪೋರ್ಟಲ್ ಮೂಲಕ ‘ಗೃಹ ಜ್ಯೋತಿ’ ಯೋಜನೆಗೆ ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚುವರಿಯಾಗಿ, ಎಲ್ಲಾ ಎಸ್ಕಾಂಗಳಲ್ಲಿ (ವಿದ್ಯುತ್ ಸರಬರಾಜು ಕಂಪನಿಗಳು) ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಜೂನ್ 15ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾ.ಒನ್ ಕೇಂದ್ರಗಳ ಮೂಲಕ ಹಾಗೂ ಮನೆಯಲ್ಲಿಯೇ ಕಂಪ್ಯೂಟರ್ ಅಥವಾ ಮೊಬೈಲ್ ಆ್ಯಪ್ ಮೂಲಕ ಅರ್ಜಿ ಸಲ್ಲಿಸಬಹುದು. ಹೊಸ ಮನೆ ನಿರ್ಮಿಸಿದವರು ಮತ್ತು ಬಾಡಿಗೆದಾರರಿಗೂ ಉಚಿತ ವಿದ್ಯುತ್ ನೀಡಲಾಗುವುದು ಎಂದು ಕಚೇರಿ ಪ್ರಕಟಣೆ ತಿಳಿಸಿದೆ.

ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಜೂನ್ 15ರಿಂದ ಆರಂಭವಾಗಲಿದೆ. ಸೇವಾ ಸಿಂಧು ಪೋರ್ಟಲ್ ಮೂಲಕ ಈ ಯೋಜನೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅದೇ ರೀತಿ ನಾಡಕಚೇರಿಗಳಲ್ಲಿಯೂ ಸಹ ಅರ್ಜಿಗಳನ್ನು ಖುದ್ದಾಗಿ ಸಲ್ಲಿಸಬಹುದಾಗಿದ್ದು, ಈ ಉದ್ದೇಶಕ್ಕಾಗಿ ಪ್ರತ್ಯೇಕ ಕೌಂಟರ್‌ಗಳನ್ನು ಸ್ಥಾಪಿಸಲಾಗುವುದು. ಅರ್ಜಿದಾರರು ಪಡಿತರ ಚೀಟಿ ಸಂಖ್ಯೆ, ಪತ್ನಿ ಮತ್ತು ಗಂಡನ ಆಧಾರ್ ಕಾರ್ಡ್ ಸಂಖ್ಯೆ, ಆಧಾರ್ ಸಂಯೋಜನೆಯೊಂದಿಗೆ ಬ್ಯಾಂಕ್ ಖಾತೆ ವಿವರಗಳನ್ನು ನೀಡಬೇಕು. ಯೋಜನೆಯ ಮೊತ್ತವನ್ನು ನೇರವಾಗಿ ಡಿಬಿಟಿ ಮೂಲಕ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ತೆರಿಗೆ ಪಾವತಿದಾರರು ಮತ್ತು ಜಿಎಸ್‌ಟಿ ನೋಂದಣಿ ಮಾಡಿಸಿಕೊಂಡವರು ಈ ಸೌಲಭ್ಯವನ್ನು ಪಡೆಯಲಾಗುವುದಿಲ್ಲ.