ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕಿನ ಹಣಕಾಸು ನೀತಿ ಸಮಿತಿಯು ಗುರುವಾರದಂದು ತನ್ನ ತ್ರೈಮಾಸಿಕ ವಿತ್ತೀಯ ನೀತಿಯನ್ನು ಪ್ರಕಟಿಸಿದ್ದು, ರೆಪೊ ದರವನ್ನು ಕಳೆದ ಬಾರಿಯ ಶೇಕಡಾ 6.5ರಷ್ಟು ಯಥಾಸ್ಥಿತಿಯಲ್ಲಿ ಮುಂದುವರಿಸಲು ನಿರ್ಧರಿಸಿದೆ.
ಆರ್ ಬಿ ಐ ಗವರ್ನರ್ ಶಕ್ತಿಕಾಂತ್ ದಾಸ್ ಮುಂಬೈನ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ ತ್ರೈಮಾಸಿಕ ವಿತ್ತೀಯ ನೀತಿಯನ್ನು ಪ್ರಕಟಿಸಿದರು.
ಹಣದುಬ್ಬರವನ್ನು ತಗ್ಗಿಸುವ ನಿಟ್ಟಿನಲ್ಲಿ ರೆಪೋದರವನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳಲಾಗಿದೆ. ಸ್ಥಿರತೆಯನ್ನು ಮೊದಲ ಆದ್ಯತೆಯಾಗಿರಿಸಿಕೊಂಡು ಆರ್ ಬಿ ಐ ನೀತಿ ರೂಪಿಸಿದೆ. ದೇಶೀಯ ಆರ್ಥಿಕತೆಯ ಮೂಲಭೂತ ಅಂಶಗಳು ಸುಧಾರಿಸುತ್ತಿವೆ. ಪ್ರಪಂಚದಾದ್ಯಂತ ನೀತಿಯನ್ನು ಸಾಮಾನ್ಯಗೊಳಿಸುವ ವಿಷಯದಲ್ಲಿ ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡಬೇಕಾಗಿದೆ ಎಂದ ಶಕ್ತಿಕಾಂತ್ ದಾಸ್, ಭಾರತದ ಆರ್ಥಿಕತೆ ಮತ್ತು ಹಣಕಾಸು ವಲಯದ ಚೇತರಿಸಿಕೊಳ್ಳುವಿಕೆ ತೃಪ್ತಿಕರವಾಗಿದೆ. ಹಣದುಬ್ಬರ ಗುರಿ ಶೇಕಡಾ 4ಕ್ಕಿಂತ ಹೆಚ್ಚಿದೆ. ವರ್ಷದ ಉಳಿದ ಅವಧಿಯಲ್ಲಿ ಹೆಚ್ಚಿನ ಮಟ್ಟದಲ್ಲಿ ಉಳಿಯುವ ನಿರೀಕ್ಷೆಯಿದೆ. ಆರ್ಥಿಕ ಬೆಳವಣಿಗೆ ಸಮಾಧಾನಕರವಾಗಿದೆ ಎಂದು ಹೇಳಿದರು.
ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಯಥಾಸ್ಥಿಯಲ್ಲಿ ಮುಂದುವರಿಸಿರುವುದರಿಂದ ದೇಶೀಯ ಬ್ಯಾಂಕುಗಳು ಕೂಡಾ ತಮ್ಮ ಬಡ್ಡಿದರವನ್ನು ಯಥಾಸ್ಥಿತಿಯಲ್ಲಿಡಲಿದ್ದು, ಇಎಂಐ ಪಾವತಿದಾರರಿಗೆ ಕೊಂಚ ನಿರಾಳವಾಗಲಿದೆ.