ಉಡುಪಿ: ಉಡುಪಿ ಕಲ್ಸಂಕದ ಶ್ರೀ ರಾಮ್ ಬಿಲ್ಡಿಂಗ್ ನಲ್ಲಿ ಕೇವಲ 200 ಚ. ಅಡಿ ವಿಸ್ತೀರ್ಣದಲ್ಲಿ 1998ರ ಜೂ. 8ರಂದು ಆರಂಭಗೊಂಡ ಸ್ನೇಹ ಟ್ಯುಟೋರಿಯಲ್ ಕಾಲೇಜು 25 ವರ್ಷಗಳಲ್ಲಿ ಗುಣಮಟ್ಟದ ಶೈಕ್ಷಣಿಕ ಸೇವೆಯ ಮೂಲಕ ವಿದ್ಯಾರ್ಥಿಗಳ, ಹೆತ್ತವರ, ಪೋಷಕರ ವಿಶ್ವಾಸ ಗಳಿಸಿದೆ. ಅನುತ್ತೀರ್ಣಗೊಂಡ ವಿದ್ಯಾರ್ಥಿಗಳ ಪಾಲಿನ ಆಶಾಕಿರಣವಾದ ಸಂಸ್ಥೆ ಇದೀಗ ಬೆಳ್ಳಿ ಹಬ್ಬದ ಸಂಭ್ರಮಾಚರಣೆಯನ್ನು ಆಚರಿಸುತ್ತಿದೆ.
ವಿದ್ಯಾರ್ಥಿಗಳು ಕಲಿಕೆಯಲ್ಲಿ ಮುಂದಿದ್ದು, ಅವರಿಗೆ ಪಾಠ ಮಾಡುವುದು ಕಷ್ಟವಲ್ಲ, ಆದರೆ ಕಲಿಕೆಯಲ್ಲಿ ಹಿಂದುಳಿದ, ಹಿಂದಿನ ತರಗತಿಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಮತ್ತೆ ಕಲಿಕೆಯ ಹಾದಿಯಲ್ಲಿ ಸಾಗಿಸಿ ದಡ ಸೇರಿಸುವುದು ಸುಲಭದ ಮಾತಲ್ಲ ಅಂತಹ ಕ್ಲಿಷ್ಟಕರ ಕಾರ್ಯ ಪರಿಪೂರ್ಣವಾಗಿ ನಡೆಸಿಕೊಂಡು ಬರುತ್ತಿರುವುದು ಸಂಸ್ಥೆಯ ವಿಶೇಷತೆ.
ಸಂಸ್ಥೆಯು 7,8,9 ನೇ ತರಗತಿಯಲ್ಲಿ ಅನುತ್ತೀರ್ಣಗೊಂಡಿರುವ ವಿದ್ಯಾರ್ಥಿಗಳಿಗೆ 10ನೇ ತರಗತಿ ಪರೀಕ್ಷೆಯನ್ನು ಬರೆಯಿಸಲಾಗುತ್ತದೆ. ಅಲ್ಲದೆ ಪ್ರಥಮ ಪಿಯುಸಿಯಲ್ಲಿ ಮಾಹಿತಿ ಕೊರತೆಯಿಂದ ತನ್ನಿಂದಾಗದ ಸಂಯೋಜನೆ ಆಯ್ದುಕೊಂಡು ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಮತ್ತೆ ಕಲಿಕೆಯ ಹಾದಿಯನ್ನು ಸಂಸ್ಥೆ ತೋರಿಸುತ್ತಿದೆ.
ಪ್ರತಿ ವರ್ಷ 200 ರಿಂದ 300 ವಿದ್ಯಾರ್ಥಿಗಳು ಇಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದು, 12 ಮಂದಿ ಪರಿಣಿತ ಉಪನ್ಯಾಸಕರು ಉತ್ತಮ ಫಲಿತಾಂಶಕ್ಕೆ ವೈಯಕ್ತಿಕ ನಿಗಾ ವಹಿಸುತ್ತಿದ್ದಾರೆ.
ಸಂಸ್ಥೆಯು 3 ಸಾವಿರ ಚ.ಅಡಿ ವಿಸ್ತೀರ್ಣದಲ್ಲಿ 4 ತರಗತಿ ಕೊಠಡಿಗಳು, 2 ಕಚೇರಿಗಳು, 1 ವಿಶ್ರಾಂತಿ ಕೊಠಡಿಯನ್ನು ಹೊಂದಿದೆ. ಜಿಲ್ಲೆಯಲ್ಲಿ ಇತರ ಶಾಲಾ ಕಾಲೇಜುಗಳಿಗೆ ಸಮಾನಾಂತರವಾಗಿ ಅನೌಪಚಾರಿಕ ಶಿಕ್ಷಣದಡಿ ಕಾರ್ಯಾಚರಿಸುತ್ತಿರುವ ಸಂಸ್ಥೆ ಕಾರಂತ ಪ್ರಶಸ್ತಿ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಗಳಿಸಿದೆ.
ಜನಸ್ನೇಹಿ ಪ್ರಾಂಶುಪಾಲರು:
ಬ್ರಹ್ಮಾವರ ಚೇರ್ಕಾಡಿ ಗ್ರಾಮದ ಮುಂಡ್ಕಿನಜೆಡ್ಡು ಅಚ್ಯುತ ನಾಯ್ಕ್, ಸುಲೋಚನಾ ದಂಪತಿಯ ಪುತ್ರ ಉಮೇಶ ಎ. ನಾಯ್ಕ್ ಅವರು ಬಾಲ್ಯದಿಂದಲೇ ಅತ್ಯಂತ ಕಷ್ಟದಿಂದ ಬೆಳೆದವರು. 9 ರಿಂದ 10ನೇ ತರಗತಿ ವರೆಗೆ ಮುಂಡ್ಕಿನಜೆಡ್ಡಿನಿಂದ ಷೇತ್ರಿವರೆಗೆ ದಿನಕ್ಕೆ 118 ಉದಯವಾಣಿ ಪ್ರತಿಗಳನ್ನು ಮನೆ ಮನೆಗೆ ಹಂಚುತ್ತಾ ತನ್ನ ವಿದ್ಯಾಭ್ಯಾಸ ಮಾಡಿದವರು.
24 ನೇ ವಯಸ್ಸಿನಲ್ಲಿ ಟ್ಯುಟೋರಿಯಲ್ ಕಾಲೇಜನ್ನು ಆರಂಭಿಸಿದ ಉಮೇಶರ ಆಡಳಿತ ಶೈಲಿ, ಮುಂದಾಲೋಚನೆಯಿಂದ ಸಂಸ್ಥೆ ಎತ್ತರಕ್ಕೆ ಬೆಳೆದಿದೆ. ನಗು ಮೊಗದಿಂದ ಎಲ್ಲರನ್ನು ತನ್ನೆಡೆಗೆ ಸೆಳೆಯುವ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರೂ ಅವರಾಗಿದ್ದಾರೆ.