ಕಾರ್ಕಳ: ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಕಾರ್ಕಳ : ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಸೋಮವಾರದಂದು ಆಚರಿಸಲಾಯಿತು.

ಉಡುಪಿ ಅರಣ್ಯ ಸಂಚಾರಿದಳದ ವಲಯ ಅರಣ್ಯಾಧಿಕಾರಿ ಚಿದಾನಂದಪ್ಪ ಜಿ. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಇಂದು ಪ್ರಕೃತಿ ವಿನಾಶದ ಅಂಚಿನೆಡೆಗೆ ಸಾಗುತ್ತಿದೆ. ಪ್ರಕೃತಿಗೆ ಪ್ರತಿಯೊಂದು ಗಿಡವೂ ಅತ್ಯಗತ್ಯ. ಪ್ರತಿಯೊಬ್ಬರೂ ಕನಿಷ್ಠ ಎರಡು ಗಿಡಗಳನ್ನಾದರೂ ನೆಟ್ಟು ಪ್ರಕೃತಿಯನ್ನು ಸಂರಕ್ಷಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಮೇರಿಯನ್ ಡಿಸೋಜ ಮಾತನಾಡಿ, ಹಿಂದೆ ನಮ್ಮ ಪ್ರಕೃತಿಯು ಬಹಳ ಸುಂದರವಾಗಿತ್ತು. ಆದರೆ ಇಂದು ನಾವು ಅಭಿವೃದ್ಧಿಯ ಹೆಸರಿನಲ್ಲಿ ಅದನ್ನು ಹಾಳು ಮಾಡುತ್ತಿದ್ದೇವೆ. ಪ್ರಸ್ತುತ ಪ್ರಕೃತಿಯನ್ನು ಸಂರಕ್ಷಿಸುವ ಕೆಲಸ ಯುವಪೀಳಿಗೆಯಿಂದ ಆಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜು ವಿಭಾಗದ ಪ್ರಾಂಶುಪಾಲ ಲಕ್ಷ್ಮೀನಾರಾಯಣ ಕಾಮತ್ ಹಾಗೂ ಪ್ರೌಢ ಶಾಲಾ ವಿಭಾಗದ ಮುಖ್ಯೋಪಾಧ್ಯಾಯ ಡೊಮಿನಿಕ್ ಅಂದ್ರಾದೆಯವರು ಉಪಸ್ಥಿತರಿದ್ದರು.

ಹತ್ತನೇ ತರಗತಿಯ ವಿದ್ಯಾರ್ಥಿಗಳು ಪರಿಸರ ಗೀತೆಯನ್ನು ಹಾಡಿದರು. ಶಿಕ್ಷಕಿ ವಿಜೇತ ಅವರು ಪರಿಸರ ದಿನದ ಪ್ರಾಮುಖ್ಯತೆಯ ಬಗ್ಗೆ ತಿಳಿಸಿದರು. ಶಿಕ್ಷಕಿಯರಾದ ನೀತಿ ಸ್ವಾಗತಿಸಿ, ರಶ್ಮಿ ವಂದಿಸಿದರು. ದಿವ್ಯರಾವ್‍ ನಿರೂಪಿಸಿದರು.