ಇನ್ನು ಮುಂದೆ ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳಿಗೂ ಜನೌಷಧಿ ಕೇಂದ್ರ ತೆರೆಯಲು ಅನುಮತಿ: ಕೇಂದ್ರ ಸಹಕಾರ ಸಚಿವಾಲಯದ ನಿರ್ಧಾರ

ಬೆಂಗಳೂರು: ದೇಶಾದ್ಯಂತ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು ತೆರೆಯಲು 2,000 ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳಿಗೆ ಅನುಮತಿ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಸಹಕಾರ ಸಚಿವಾಲಯ ಮಂಗಳವಾರ ತಿಳಿಸಿದೆ.

ಇದರಂತೆ ಆಗಸ್ಟ್ ವರೆಗೆ ಸುಮಾರು 1,000 ಜನೌಷಧಿ ಕೇಂದ್ರಗಳನ್ನು ತೆರೆಯಲಾಗುವುದು. ಉಳಿದ 1,000 ಕೇಂದ್ರಗಳನ್ನು ಈ ವರ್ಷದ ಡಿಸೆಂಬರ್ ವರೆಗೆ ತೆರೆಯಲಾಗುವುದು ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಸಹಕಾರ ಸಚಿವ ಅಮಿತ್ ಶಾ ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಮನ್ಸುಖ್ ಎಸ್ ಮಾಂಡವಿಯಾ ನಡುವೆ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಈ ಮಹತ್ವದ ನಿರ್ಧಾರವು ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳ ಆದಾಯವನ್ನು ಹೆಚ್ಚಿಸುವುದು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಮಾತ್ರವಲ್ಲದೆ ಜನರಿಗೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಕೈಗೆಟುಕುವ ಬೆಲೆಯಲ್ಲಿ ಔಷಧಿಗಳು ಲಭ್ಯವಾಗುವಂತೆ ಮಾಡುತ್ತದೆ.

ಇದುವರೆಗೆ ದೇಶಾದ್ಯಂತ 9,400 ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದೆ. ಸುಮಾರು 1,800 ವಿಧದ ಔಷಧಗಳು ಮತ್ತು 285 ಇತರ ವೈದ್ಯಕೀಯ ಸಾಧನಗಳು ಕೇಂದ್ರಗಳಲ್ಲಿ ಲಭ್ಯವಿದೆ.

ಜನೌಷಧಿ ಕೇಂದ್ರಗಳನ್ನು ತೆರೆಯಲು ಬಯಸುವ ವೈಯಕ್ತಿಕ ಅರ್ಜಿದಾರು ಡಿ ಫಾರ್ಮಾ/ಬಿ ಫಾರ್ಮಾ ಹೊಂದಿರುವುದು ಅವಶ್ಯವಾಗಿದೆ. ಯಾವುದೇ ಸಂಸ್ಥೆ, ಎನ್‌ಜಿಒ, ಚಾರಿಟಬಲ್ ಸಂಸ್ಥೆ ಮತ್ತು ಆಸ್ಪತ್ರೆಗಳು ಬಿ ಫಾರ್ಮಾ / ಡಿ ಫಾರ್ಮಾ ಪದವಿ ಹೊಂದಿರುವವರನ್ನು ನೇಮಿಸುವ ಮೂಲಕ ಅರ್ಜಿ ಸಲ್ಲಿಸಬಹುದು. ಜನೌಷಧಿ ಕೇಂದ್ರವನ್ನು ತೆರೆಯಲು, ಕನಿಷ್ಠ 120 ಚದರ ಅಡಿ ಜಾಗವು ಖಾಸಗಿ ಒಡೆತನದಲ್ಲಿ ಅಥವಾ ಬಾಡಿಗೆಗೆ ಲಭ್ಯವಿರಬೇಕು. ಕೇಂದ್ರ ತೆರೆಯಲು ಅರ್ಜಿ ಶುಲ್ಕ 5,000 ರೂ.

ಮಹಿಳಾ ಉದ್ಯಮಿಗಳು, ದಿವ್ಯಾಂಗರು, ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಮಾಜಿ ಸೈನಿಕರು ವಿಶೇಷ ವರ್ಗದ ಅಡಿಯಲ್ಲಿ ಬರುತ್ತಾರೆ. ವಿಶೇಷ ವರ್ಗಗಳ ಅರ್ಜಿದಾರರಿಗೆ ಅರ್ಜಿ ಶುಲ್ಕದಲ್ಲಿ ವಿನಾಯಿತಿ ಇದೆ. ಜನೌಷಧಿ ಕೇಂದ್ರದ ಪ್ರೋತ್ಸಾಹಕ ಮೊತ್ತವು ರೂ. 5 ಲಕ್ಷ (ಮಾಸಿಕ ಖರೀದಿಗಳ ಶೇಕಡಾ 15 ಅಥವಾ ತಿಂಗಳಿಗೆ ಗರಿಷ್ಠ ರೂ. 15,000). ವಿಶೇಷ ವರ್ಗಗಳು ಮತ್ತು ಪ್ರದೇಶಗಳಲ್ಲಿ ಐಟಿ ಮತ್ತು ಮೂಲ ವೆಚ್ಚಗಳಿಗೆ ಮರುಪಾವತಿಯಾಗಿ 2 ಲಕ್ಷ ರೂಪಾಯಿಗಳ ಒಂದು ಬಾರಿ ಹೆಚ್ಚುವರಿ ಪ್ರೋತ್ಸಾಹವನ್ನು ಸಹ ಒದಗಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.