ಮಣಿಪಾಲದಲ್ಲಿ ಬೀದಿನಾಯಿಗಳ ಮಾರಣಹೋಮ: ವಿಷವುಣಿಸಿ‌ 10 ನಾಯಿಗಳ‌ ಹತ್ಯೆ

ಉಡುಪಿ, ಜೂ.25: ಮಣಿಪಾಲ ಮಾಂಡವಿ ಎಮರಾಲ್ಡ್ ಮುಂಭಾಗ 10 ಬೀದಿ ನಾಯಿಗಳನ್ನು ಮೀನಿನ ಮೂಲಕ ವಿಷ ಹಾಕಿ ಹತ್ಯೆಗೈಯ್ಯಲಾಗಿದೆ.
ಜೂ. 22ರಂದು ರಾತ್ರಿ ಬೈಕಿನಲ್ಲಿ ಬಂದ ದುಷ್ಕರ್ಮಿ ವಿಷಪೂರಿತ ಮೀನುಗಳನ್ನು ಬೀದಿ ನಾಯಿಗಳಿಗೆ ಹಾಕಿ ತಿನ್ನುವಂತೆ ಮಾಡಿದ್ದು, ಇದರಿಂದ 8 ನಾಯಿಗಳು ಮತ್ತು ಜೂ.24ರಂದು ಎರಡು ನಾಯಿಗಳು ಮೃತಪಟ್ಟಿವೆ ಎಂದು ಮಲ್ಪೆ ಮಧ್ವರಾಜ್ ಅನಿಮಲ್ ಕೇರ್ ಟ್ರಸ್ಟ್ನ ಬಬಿತಾ ರಾಜ್ ಮಣಿಪಾಲ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಎಲ್ಲ ನಾಯಿಗಳ ಕಳೇಬರಹವನ್ನು ಉಡುಪಿ ನಗರಸಭೆ ಸಿಬಂದಿ ತೆಗೆದು ಕೊಂಡು ಹೋಗಿದ್ದು, ಅವುಗಳನ್ನು ಜಿಲ್ಲಾ ಪಶುವೈದ್ಯ ಅಧಿಕಾರಿಗಳ ಮೂಲಕ ಮರಣೋತ್ತರ ಪರೀಕ್ಷೆ ನಡೆಸಬೇಕು. ಈ ಸಂಬಂಧ ಪ್ರಕರಣ ದಾಖಲಿಸಿ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ತಡೆಗಟ್ಟುವ ಸೆಕ್ಷನ್ 11ರ ಉಲ್ಲಂಘನೆ ಇದಾಗಿದ್ದು, ಅದರಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ. ಅದರಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.