ನವದೆಹಲಿ: ಬಿಜೆಪಿ ಸಂಸದ ಮತ್ತು ದೇಶದ ಕುಸ್ತಿ ಒಕ್ಕೂಟದ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಭಾರತದ ಅಗ್ರ ಕುಸ್ತಿಪಟುಗಳು ಶನಿವಾರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ.
ಒಲಿಂಪಿಕ್ ಕ್ರೀಡಾಪಟು ಬಜರಂಗ್ ಪೂನಿಯಾ ಅವರು ಶನಿವಾರ ಸಂಜೆ ಗೃಹ ಸಚಿವರನ್ನು ಅವರ ದೆಹಲಿಯ ಮನೆಯಲ್ಲಿ ಭೇಟಿಯಾದರು ಎಂದು ಎನ್.ಡಿ.ಟಿ.ವಿ ವರದಿ ತಿಳಿಸಿದೆ.
ರಾತ್ರಿ 11 ಗಂಟೆಗೆ ಆರಂಭವಾದ ಸಭೆಯು ಒಂದು ಗಂಟೆಗೂ ಹೆಚ್ಚು ಕಾಲ ನಡೆಯಿತು. ಸಭೆಯಲ್ಲಿ ಪುನಿಯಾ, ಸಾಕ್ಷಿ ಮಲಿಕ್, ಸಂಗೀತಾ ಫೋಗಟ್ ಮತ್ತು ಸತ್ಯವರ್ತ್ ಕಡಿಯನ್ ಭಾಗವಹಿಸಿದ್ದರು ಎಂದು ಮೂಲಗಳು ಹೇಳಿರುವುದಾಗಿ ಮಾಧ್ಯಮ ವರದಿ ಹೇಳಿದೆ.
ಅಪ್ರಾಪ್ತ ವಯಸ್ಕ ಸೇರಿದಂತೆ ಏಳು ಮಹಿಳಾ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ನಿಷ್ಪಕ್ಷಪಾತ ತನಿಖೆ ಮತ್ತು ತ್ವರಿತ ಕ್ರಮಕ್ಕೆ ಕುಸ್ತಿಪಟುಗಳು ಒತ್ತಾಯಿಸಿದ್ದಾರೆ ಎಂದು ಅವರು ಹೇಳಿದರು.
ಕಾನೂನು ಎಲ್ಲರಿಗೂ ಒಂದೇ ಆಗಿರುತ್ತದೆ ಎಂದು ಅಮಿತ್ ಶಾ ಕುಸ್ತಿಪಟುಗಳಿಗೆ ಭರವಸೆ ನೀಡಿದರು. “ಕಾನೂನು ತನ್ನದೇ ಆದ ಕ್ರಮವನ್ನು ತೆಗೆದುಕೊಳ್ಳಲಿ” ಎಂದು ಅವರು ಕುಸ್ತಿಪಟುಗಳಿಗೆ ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಕುಸ್ತಿ ಫೆಡರೇಶನ್ ಮುಖ್ಯಸ್ಥರ ವಿರುದ್ಧ ಕ್ರಮಕ್ಕೆ ಐದು ದಿನಗಳ ಗಡುವು ಶನಿವಾರ ಕೊನೆಗೊಂಡ ನಂತರ ಪ್ರತಿಭಟನಾ ನಿರತ ಕುಸ್ತಿಪಟುಗಳು ಗೃಹ ಸಚಿವರನ್ನು ಭೇಟಿಯಾಗಲು ಕೋರಿದ್ದರು ಎನ್ನಲಾಗಿದೆ.