ಪಟ್ನಾ: ಬಿಹಾರದ ಭಾಗಲ್ಪುರ ಜಿಲ್ಲೆಯಲ್ಲಿ ಗಂಗಾ ನದಿಗೆ 1,716 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಸೇತುವೆ ಭಾನುವಾರ ಕುಸಿದು ಬಿದ್ದಿದೆ. ಭಾಗಲ್ಪುರದ ಸುಲ್ತಂಗಂಜ್ ಮತ್ತು ಖಗಾರಿಯಾ ಜಿಲ್ಲೆಯ ಆಗುವನಿ ನಡುವೆ ನಿರ್ಮಿಸಲಾಗಿದ್ದ ಚತುಷ್ಪಥ ಸೇತುವೆ ಎರಡನೇ ಬಾರಿಗೆ ಕುಸಿದಿದೆ. ಘಟನೆ ಕುರಿತು ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ.
ಕಳೆದ ವರ್ಷ ಜೋರಾದ ಗಾಳಿ ಮಳೆಗೆ ಸೇತುವೆ ಕುಸಿದಿತ್ತು. 2014 ರಲ್ಲಿ ಪ್ರಾರಂಭವಾದ ಸೇತುವೆಯನ್ನು ಪೂರ್ಣಗೊಳಿಸಲು ಇದುವರೆಗೆ ಎಂಟು ಬಾರಿ ಗಡು ನೀಡಲಾಗಿದ್ದರೂ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.
ಸೇತುವೆ ಕುಸಿಯಲು ಪ್ರಾರಂಭಿಸಿದಾಗ, ಅನೇಕ ಕಾರ್ಮಿಕರು ಅದರ ಮೇಲೆ ಕೆಲಸ ಮಾಡುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಇಲ್ಲಿಯವರೆಗೆ ಯಾವುದೇ ಸಾವು ನೋವುಗಳ ವರದಿ ಬಂದಿಲ್ಲ.
2014ರ ಫೆ.23ರಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಖಗಾರಿಯಾದಲ್ಲಿ ಆಗುವನಿ ಘಾಟ್ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. 2015 ರ ಮಾರ್ಚ್ 9 ರಂದು ನಿತೀಶ್ ಕುಮಾರ್ ಕಾಮಗಾರಿಗೆ ಚಾಲನೆ ನೀಡಿದರು. 2016 ರಿಂದ ಪ್ರಾರಂಭವಾದ ಕಾಮಗಾರಿ ಮುಗಿದು 2019ರಲ್ಲಿ ಸೇತುವೆ ಸಿದ್ಧವಾಗಬೇಕಿತ್ತು. ಆದರೆ ಆ ವೇಳೆಗೆ ಶೇ.25ರಷ್ಟು ಕಾಮಗಾರಿಯೂ ಸರಿಯಾಗಿ ಆಗಿರಲಿಲ್ಲ. ನಂತರ, ರಾಜ್ಯ ಸರ್ಕಾರವು ಗಡುವನ್ನು ಮಾರ್ಚ್ 2020 ಕ್ಕೆ, ಬಳಿಕ 2022 ಕ್ಕೆ ವಿಸ್ತರಿಸಿತು. ಕಾಮಗಾರಿ ವಿಳಂಬಕ್ಕೆ ಸರ್ಕಾರವು ದಂಡ ವಿಧಿಸುವ ಬದಲು ಕಾಮಗಾರಿ ಪೂರ್ಣಗೊಳಿಸಲು ಕಾಲಾವಕಾಶ ನೀಡುತ್ತಲೇ ಇದೆ.
ಸೇತುವೆ ಕುಸಿತದ ಸುದ್ದಿ ತಿಳಿದ ಕೂಡಲೇ ರಸ್ತೆ ನಿರ್ಮಾಣ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ನಿತೀಶ್ ಕುಮಾರ್, ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಲ್ಲದೆ, ತನಿಖೆ ನಡೆಸುವಂತೆ ಸೂಚಿಸಿದ್ದಾರೆ. ಉಪಮುಖ್ಯಮಂತ್ರಿ ತೇಜಸ್ವಿ ಪ್ರಸಾದ್ ಯಾದವ್ ರಸ್ತೆ ನಿರ್ಮಾಣ ಇಲಾಖೆಯ ಖಾತೆಯನ್ನು ಹೊಂದಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.